ಉದಯವಾಹಿನಿ, ಸೂರಜ್‌ಪುರ​ (ಛತ್ತೀಸ್​ಗಢ): ಆಟೋ ಡ್ರೈವರ್​ ಒಬ್ಬರನ್ನು ಮಕ್ಕಳ ಕಳ್ಳ ಎಂದು ಶಂಕಿಸಿ, ಜನರು ಆತನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ಛತ್ತೀಸ್​ಗಢದ ಸೂರಜ್‌ಪುರ​ನಲ್ಲಿ ನಡೆದಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಮರಕ್ಕೆ ಕಟ್ಟಿಹಾಕಿ ವ್ಯಕ್ತಿಯೊಬ್ಬನನ್ನು ಥಳಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಸ್ಥಳಕ್ಕೆ ತೆರಳಿದ ಪೊಲೀಸರು ಆತನನ್ನು ರಕ್ಷಿಸಿದ್ದಾರೆ. ಘಟನೆ ಕುರಿತು ವಿವರ ನೀಡಿರುವ ಎಸ್‌ಡಿಒಪಿ ಅಭಿಷೇಕ್ ಪೈಕ್ರಾ, ಸೂರಜ್‌ಪುರದ ರಿಂಗ್ ರಸ್ತೆಯಲ್ಲಿರುವ ಪರಶುರಾಮ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಆಟೋ ಚಾಲಕ ಹಾದುಹೋಗುತ್ತಿದ್ದಾಗ ಶಾಲಾ ವಿದ್ಯಾರ್ಥಿನಿಯರನ್ನು ತನ್ನ ಆಟೋದಲ್ಲಿ ಮನೆಗೆ ಬಿಡಲು ಮುಂದಾಗಿದ್ದಾನೆ.

ಬಾಲಕಿಯನ್ನು ಪದೇ ಪದೆ ಒತ್ತಾಯಿಸಿರುವುದನ್ನು ಕಂಡ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ತಕ್ಷಣಕ್ಕೆ ಸ್ಥಳದಲ್ಲಿ ಜನರ ಗುಂಪುಗೂಡಿದ್ದಾರೆ. ಕೆಲವರು ಆತನನ್ನು ಮಕ್ಕಳ ಕಳ್ಳ ಎಂದು ಭಾವಿಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಜನರು ಆಟೋ ಡ್ರೈವರ್​ನನ್ನು ಅಲ್ಲಿಯೇ ಹತ್ತಿರವಿದ್ದ ಮರಕ್ಕೆ ಕಟ್ಟಿದ್ದಾರೆ. ಬಳಿಕ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಈ ದೃಶ್ಯಗಳನ್ನು ಕೆಲವರು ವಿಡಿಯೋ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪೊಲೀಸರ ವಶದಲ್ಲಿ ಆಟೋ ಡ್ರೈವರ್​: ಈ ಘಟನೆ ವರದಿಯಾಗುತ್ತಿದ್ದಂತೆ ತಕ್ಷಣಕ್ಕೆ ಕೊಟ್ವಾಲಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಆಕ್ರೋಶಿತಗೊಂಡ ಜನರ ಗುಂಪನ್ನು ಸಮಾಧಾನ ಮಾಡಿ, ಆಟೋ ಚಾಲಕನನ್ನು ಬಿಡಿಸಿಕೊಂಡು ಪೊಲೀಸ್​ ಠಾಣೆಗೆ ಕರೆ ತರಲಾಗಿದೆ. ಆಟೋ ಚಾಲಕ ಕುಡಿದಿರುವ ಹಿನ್ನೆಲೆ ಪೊಲೀಸರಿಗೆ ಹೇಳಿಕೆಯನ್ನು ದಾಖಲಿಸಲು ಸಾಧ್ಯವಾಗುತ್ತಿಲ್ಲ. ಚಾಲಕನ ವಿರುದ್ಧ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ ಐಪಿಸಿ ಸೆಕ್ಷನ್ 185 ರ ಅಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!