ಉದಯವಾಹಿನಿ, ಎರ್ನಾಕುಲಂ(ಕೇರಳ): ಚುನಾವಣೆಯ ಹೊಸ್ತಿಲಲ್ಲಿರುವ ಕೇರಳಕ್ಕೆ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿಯಲ್ಲಿ ಇಂದು ನಡೆದ ಭವ್ಯ ಸಮಾರಂಭದಲ್ಲಿ 10,800 ಕೋಟಿ ರೂಪಾಯಿ ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ರಾಜ್ಯದ ಅಧಿಕೃತ ಹೆಸರು ಬದಲಾವಣೆಯ ನಂತರದ ತಮ್ಮ ಮೊದಲ ಭೇಟಿಯ ವೇಳೆ ಮಾಡಿದ ಭಾಷಣವನ್ನು ‘ಕೇರಳ ಈಗ ಕೇರಳಂ’ ಎಂದು ಘೋಷಿಸುವ ಮೂಲಕ ಪ್ರಾರಂಭಿಸಿದರು.

ಮಲಯಾಳಿಗಳ ಬಹುಕಾಲದ ಆಸೆಯನ್ನು ಪೂರೈಸಿದ್ದಕ್ಕೆ ಕೇಂದ್ರ ಸರ್ಕಾರ ಹೆಮ್ಮೆಪಡುತ್ತದೆ ಎಂದು ಹೇಳುವ ಮೂಲಕ ಪ್ರಧಾನಿ, ರಾಜ್ಯವನ್ನು ‘ಕೇರಳಂ’ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಿರುವುದನ್ನು ಪ್ರಸ್ತಾಪಿಸಿದರು. ಈ ಬದಲಾವಣೆಯು ರಾಜ್ಯದ ವೈಶಿಷ್ಯತೆ ಮತ್ತು ಸಂಸ್ಕೃತಿಯನ್ನು ಜಾಗತಿಕ ವೇದಿಕೆಯಲ್ಲಿ ಗುರುತಿಸುವುದಾಗಿದೆ” ಎಂದರು.

‘ಜನರೇ ನನ್ನ ದೇವರು’: “ನನಗೆ, ಜನರೇ ನನ್ನ ದೇವರು. ಆದ್ದರಿಂದ ನಾನು ಇಲ್ಲಿಗೆ ಬಂದಿರುವುದು ಆಶೀರ್ವಾದ ನೀಡಲು ಅಲ್ಲ, ಬದಲಿಗೆ ಜನರಿಂದ ಆಶೀರ್ವಾದ ಪಡೆಯಲು. ಕಳೆದ ವರ್ಷ ಸಂಭವಿಸಿದ ಭೀಕರ ಪ್ರವಾಹದಲ್ಲಿ ಧೀವರ ಸಮುದಾಯವು ತೋರಿಸಿದ ಸೇವಾ ಮನೋಭಾವವನ್ನು ಜಗತ್ತೇ ನೋಡಿದೆ” ಎಂದು ಅವರು ಹೇಳಿದರು. ಸುರಕ್ಷಿತ ಕರಾವಳಿ, ಮೂಲಸೌಕರ್ಯಕ್ಕೆ ಉತ್ತೇಜನ: “ಮೀನುಗಾರರ ಸುರಕ್ಷತೆಗಾಗಿ ಈಗಾಗಲೇ ದೋಣಿಗಳಲ್ಲಿ 4,500 ಉಪಗ್ರಹ ಟ್ರಾನ್ಸ್‌ಪಾಂಡರ್‌ಗಳನ್ನು ಅಳವಡಿಸಲಾಗಿದೆ. ಭವಿಷ್ಯದಲ್ಲಿ ಇದನ್ನು 1.5 ಲಕ್ಷ ದೋಣಿಗಳಿಗೆ ವಿಸ್ತರಿಸುವ ಯೋಜನೆ ಇದೆ. ಬಿಪಿಸಿಎಲ್ ಕೊಚ್ಚಿ ಸಂಸ್ಕರಣಾಗಾರದಲ್ಲಿರುವ 5,500 ಕೋಟಿ ವೆಚ್ಚದ ಪಾಲಿಪ್ರೊಪಿಲೀನ್ ಸ್ಥಾವರ, ರಾಷ್ಟ್ರೀಯ ಹೆದ್ದಾರಿ 66ರ ನವೀಕರಿಸಿದ ವಿಭಾಗಗಳು ಮತ್ತು ಅಮೃತ್ ಭಾರತ್ ರೈಲು ನಿಲ್ದಾಣಗಳು ಕೇರಳವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿವೆ. ರಾಜಕೀಯವಾಗಿ ಹೇಳುವುದಾದರೆ, ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಮೀನುಗಾರರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲಾಯಿತು. ಇದು ಕರಾವಳಿ ವಲಯದಲ್ಲಿ ಗಮನಾರ್ಹ ಹೂಡಿಕೆಗಳಿಗೆ ಕಾರಣವಾಯಿತು” ಎಂದು ಪ್ರಧಾನಿ ತಿಳಿಸಿದರು.

 

Leave a Reply

Your email address will not be published. Required fields are marked *

error: Content is protected !!