ಉದಯವಾಹಿನಿ, ಬೆಂಗಳೂರು: ಮಾರ್ಚ್ 16 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ತಡೆಯಲು ಒಡಿಶಾದ(Odisha) ಕಾಂಗ್ರೆಸ್ ಶಾಸಕರು ರಾಮನಗರದ ಬಿಡದಿಯಲ್ಲಿರುವ ವಂಡರ್ ಲಾ ರೆಸಾರ್ಟ್‌ಗೆ ಶಿಫ್ಟ್ ಆಗಿದ್ದಾರೆ.ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ (OPCC) ಅಧ್ಯಕ್ಷ ಭಕ್ತ ಚರಣ್ ದಾಸ್ ಅವರೊಂದಿಗೆ ಪಕ್ಷದ 14 ಶಾಸಕರಲ್ಲಿ ಒಂಬತ್ತು ಮಂದಿ ಶಾಸಕರು ತಡರಾತ್ರಿ ಬೆಂಗಳೂರಿಗೆ ಬಂದಿದ್ದಾರೆ. ಚುನಾವಣಾ ದಿನದಂದು ಶಾಸಕರು ಭುವನೇಶ್ವರಕ್ಕೆ ಮರಳುವ ಸಾಧ್ಯತೆಯಿದೆ.
ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ಕಣದಲ್ಲಿದ್ದಾರೆ. ಇವರನ್ನು ಗೆಲ್ಲಿಸಲು ಕಾಂಗ್ರೆಸ್ ಶಾಸಕರಿಂದ ಬಿಜೆಪಿ ಅಡ್ಡ ಮತದಾನ ನಡೆಸುವ ಸಾಧ್ಯತೆ ಇರುವುದರಿಂದ 9 ಮಂದಿಯನ್ನು ಬೆಂಗಳೂರಿಗೆ ಕರೆತರಲಾಗಿದೆ. ಉಳಿದ ಶಾಸಕರು ಇಂದು ಬೆಂಗಳೂರಿಗೆ ಬರುವ ಸಾಧ್ಯತೆಯಿದೆ. ಬಿಜೆಡಿ ಅಭ್ಯರ್ಥಿ ಡಾ. ದತ್ತೇಶ್ವರ ಹೋಟಾ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಬಿಜೆಡಿ ಮತ್ತು ಕಾಂಗ್ರೆಸ್ ಎರಡನೇ ಸ್ಥಾನವನ್ನು ಗೆಲ್ಲುವ ಸಂಖ್ಯಾಬಲವನ್ನು ಹೊಂದಿದ್ದರೂ ದಿಲೀಪ್ ರೇ ಕಣದಲ್ಲಿರುವುದು ಕಾಂಗ್ರೆಸ್ ಆತಂಕಕ್ಕೆ ಕಾರಣವಾಗಿದೆ. 2022 ರ ಚುನಾವಣೆಯಲ್ಲಿ ಒಂದು ಡಜನ್ ಕಾಂಗ್ರೆಸ್ ಮತ್ತು ಬಿಜೆಡಿ ಶಾಸಕರು ಅಡ್ಡ ಮತದಾನ ಮಾಡಿದ್ದರು.
ರೆಸಾರ್ಟ್‌ಗೆ ಆಗಮಿಸಿದ ಶಾಸಕರನ್ನು ರಾಜ್ಯ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಸ್ವಾಗತ ಮಾಡಿದರು. ಶಾಸಕರು ತಂಗಿರುವ ಕಾರಣ ರೆಸಾರ್ಟ್ (Wonderla Resort) ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಗುರುವಾರ ರಾತ್ರಿ ಈ ಸುದ್ದಿ ಬಂದಾಗ ಅಸ್ಸಾಂ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ಬಂದಿತ್ತು. ಆದರೆ ಈಗ ಬೆಂಗಳೂರಿಗೆ ಬಂದಿರುವುದು ಒಡಿಶಾ ಶಾಸಕರು ಎನ್ನುವುದು ತಿಳಿದು ಬಂದಿದೆ.
