ಉದಯವಾಹಿನಿ, ಬೆಂಗಳೂರು: ಗೃಹಜ್ಯೋತಿ ಯೋಜನೆಯನ್ನು ಆಗಸ್ಟ್ 5 ರಂದು ಕಲಬುರ್ಗಿಯಲ್ಲಿ ಉದ್ಘಾಟಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜುಲೈ 1 ರಿಂದ ಬಳಸಿದ ವಿದ್ಯುತ್‍ಗೆ ಗೃಹಜ್ಯೋತಿ ಯೋಜನೆಯಡಿ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ. ಯೋಜನೆಯನ್ನು ಆ.5 ರಂದು ಕಲಬುರ್ಗಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಲಾಗುವುದು.ಎಐಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಈವರೆಗೂ 1.40 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಜುಲೈ ತಿಂಗಳಿನ ಬಿಲ್‍ನಲ್ಲಿ ಒಂದಿಷ್ಟು ಗೊಂದಲವಿದೆ. ಜೂನ್‍ನಲ್ಲಿ ಬಳಕೆಯಾದ ವಿದ್ಯುತ್‍ಗೆ ಜುಲೈನಲ್ಲಿ ಬಿಲ್ ನೀಡಲಾಗಿದೆ.ಜುಲೈ 1 ರಿಂದ 15 ರವರೆಗೆ ಬಳಸಿದ ವಿದ್ಯುತ್ ಸೇರಿ ಬಿಲ್ ನೀಡಿರುವುದರಿಂದ ಗ್ರಾಹಕರು ಹಣ ಪಾವತಿ ಮಾಡಿದ್ದಾರೆ. ಯೋಜನೆ ಜುಲೈ 1 ರಿಂದ ಜಾರಿಯಾಗಿರುವುದರಿಂದ ಗ್ರಾಹಕರು ಪಾವತಿಸಿದ 15 ದಿನಗಳ ವಿದ್ಯುತ್ ಶುಲ್ಕವನ್ನು ಮರು ಪಾವತಿಸಲಾಗುವುದು ಎಂದು ಗ್ರಾಹಕರ ವಿದ್ಯುತ್ ಬಾಕಿಗೆ ಇದನ್ನು ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಒಂದು ವೇಳೆ ಯಾವುದೇ ಬಾಕಿ ಉಳಿದಿಲ್ಲವಾದರೆ, ಪಾವತಿಸಿದ ಹಣವನ್ನು ಗ್ರಾಹಕರಿಗೆ ಮರು ನಗದೀಕರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!