ಉದಯವಾಹಿನಿ, ಗಾಜಿಯಾಬಾದ್: 13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್​ ರಾಣಾ ಅವರಿಗೆ ಸುಪ್ರೀಂ ಕೋರ್ಟ್​ ದಯಾಮರಣ ನೀಡಿದೆ. ಅದರಂತೆ, ಹರೀಶ್​ ಅವರಿಗೆ ಗೌರವಯುತ ಸಾವಿನ ಕೊನೆಯ ಹಂತಕ್ಕಾಗಿ ಅವರನ್ನು ದೆಹಲಿಯ ಏಮ್ಸ್​ ಆಸ್ಪತ್ರೆಗೆ ಶನಿವಾರ ಸಂಜೆ ದಾಖಲಿಸಲಾಗಿದೆ.
ಜೀವಚ್ಛವವಾಗಿದ್ದ ಮಗನಿಗೆ ಅಂತಿಮ ವಿದಾಯ ಹೇಳಲು ಹರೀಶ್​ ಅವರ ತಂದೆ ಅಶೋಕ್​ ರಾಣಾ ಮತ್ತು ಅವರ ಪತ್ನಿ ಆಸ್ಪತ್ರೆಗೆ ಬಂದರು. ಪುತ್ರ ಅನುಭವಿಸುತ್ತಿದ್ದ ನರಕಯಾತನೆ ಅಂತ್ಯವಾಗಲಿದೆ ಎಂಬ ಸಮಾಧಾನ ಒಂದೆಡೆಯಾದರೆ, ಇನ್ನು ಮುಂದೆ ಆತ ನಮ್ಮ ಜೊತೆ ಇರುವುದಿಲ್ಲ ಎಂಬ ದುಃಖ ಅವರನ್ನು ಕಾಡುತ್ತಿತ್ತು.

ಜೀವ ರಕ್ಷಕ ವ್ಯವಸ್ಥೆ ತೆಗೆಯುವ ಹಂತ ಶುರು: ಶನಿವಾರ ಸಂಜೆ 5 ಗಂಟೆಗೆ ಹರೀಶ್​ ರಾಣಾ ಅವರನ್ನು ಏಮ್ಸ್​ ಆಸ್ಪತ್ರೆಗೆ ಕರೆತರಲಾಗಿದೆ. 6 ವೈದ್ಯರ ತಂಡವು ದಯಾಮರಣ ಕಾರ್ಯವಿಧಾನವನ್ನು ಮುಗಿಸಲಿದ್ದಾರೆ. ವೈದ್ಯಕೀಯ ತಂಡವು ಹಂತ ಹಂತವಾಗಿ ಹರೀಶ್​ ಅವರಿಗೆ ಒದಗಿಸಲಾಗಿದ್ದ ಜೀವ ರಕ್ಷಕ ವ್ಯವಸ್ಥೆಯನ್ನು ತೆಗೆದು ಹಾಕಲಿದ್ದಾರೆ ಎಂದು ರಾಣಾ ಅವರ ಪರ ವಕೀಲ ಮನೀಶ್​ ಜೈನ್​ ತಿಳಿಸಿದರು.

ಇದು ಸಂಪೂರ್ಣ ಗೌಪ್ಯ ಪ್ರಕ್ರಿಯೆಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ವೈದ್ಯರು ನೀಡುವುದಿಲ್ಲ. ವೈದ್ಯಕೀಯ ತಂಡವು ಮುಂದಿನ ಕಾರ್ಯಗಳ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದಾರೆ. ಪ್ರಕ್ರಿಯೆಯು ವೈದ್ಯಕೀಯ ಚೌಕಟ್ಟಿನಲ್ಲಿ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಎಂದರು.

ಪ್ರಕ್ರಿಯೆ ಹೇಗೆ ನಡೆಯುತ್ತದೆ? ದಯಾಮರಣ ಪ್ರಕ್ರಿಯೆಯ ಭಾಗವಾಗಿ, ಹರೀಶ್ ರಾಣಾ ಅವರಿಗೆ ದ್ರವ ಆಹಾರವನ್ನು ಒದಗಿಸಲು ಮತ್ತು ತ್ಯಾಜ್ಯ ಸಂಗ್ರಹಣೆಗಾಗಿ ಅಳವಡಿಸಿದ್ದ ಟ್ಯೂಬ್‌ಗಳನ್ನು ತೆಗೆದುಹಾಕಲಾಗುತ್ತದೆ. ಅವರನ್ನು ನೈಸರ್ಗಿಕ ಶಾರೀರಿಕ ಸ್ಥಿತಿಗೆ ತರಲಾಗುತ್ತದೆ. ನಂತರ, ಅವರ ದೇಹವು ಬೆಂಬಲಿಸುವಷ್ಟು ಸಮಯದವರೆಗೆ ಅವರು ಜೀವಂತವಾಗಿರುತ್ತಾರೆ. ಹರೀಶ್​ ಅವರು, ನಿಧನರಾದ ನಂತರ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಹರೀಶ್ ರಾಣಾ ಅವರ ಕುಟುಂಬವು ಅವರ ಅಂಗಗಳನ್ನು ದಾನ ಮಾಡುವ ಬಯಕೆಯನ್ನು ವ್ಯಕ್ತಪಡಿಸಿರುವುದರಿಂದ, ವೈದ್ಯಕೀಯ ತಂಡವು ಮೊದಲು ಅವರ ಎಲ್ಲಾ ಅಂಗಗಳ ಸಂಪೂರ್ಣ ಪರೀಕ್ಷೆ ನಡೆಸಲಿದೆ. ಅವುಗಳಲ್ಲಿ ಯಾವುದು ದಾನಕ್ಕೆ ಯೋಗ್ಯವಾಗಿದೆಯೋ ಅದನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.ಸುಪ್ರೀಂನಿಂದ ಐತಿಹಾಸಿಕ ತೀರ್ಪು: 13 ವರ್ಷಗಳ ಹಿಂದೆ ಚಂಡೀಗಢದಲ್ಲಿದ್ದಾಗ ಹರೀಶ್ ರಾಣಾ ಅವರು ಪಿಜಿ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದಿದ್ದರು. ಹೀಗಾಗಿ ಅವರ ಮೆದುಳಿಗೆ ತೀವ್ರ ಗಾಯವಾಗಿತ್ತು. ಘಟನೆಯ ಬಳಿಕ ಅವರು ಕೋಮಾಗೆ ಜಾರಿದ್ದರು. ಅವರ ತಂದೆ ಅಶೋಕ್ ರಾಣಾ ಮತ್ತು ಅವರ ತಾಯಿ ನಿರಂತರವಾಗಿ ಅವರ ಆರೈಕೆ ಮಾಡುತ್ತಿದ್ದರು. ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬರದ ಕಾರಣ, ಅವರ ತಂದೆ ಹರೀಶ್​​ಗೆ ದಯಾಮರಣ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿತು. ಇದು ನ್ಯಾಯಾಂಗ ಇತಿಹಾಸದಲ್ಲೇ ಐತಿಹಾಸಿಕ ನಿರ್ಧಾರವಾಗಿದೆ. ಇದರ ಬೆನ್ನಲ್ಲೇ, ಹರೀಶ್ ರಾಣಾ ಅವರನ್ನು ಏಮ್ಸ್‌ಗೆ ದಾಖಲಿಸಿ ಅಂತಿಮ ಪ್ರಕ್ರಿಯೆ ಆರಂಭಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!