ಉದಯವಾಹಿನಿ, ಭೋಪಾಲ್: ಶಾರ್ಟ್ ಸರ್ಕ್ಯೂಟ್‌ನಿಂದ ಇವಿ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ 7 ಮಂದಿ ಸಜೀವ ದಹನಗೊಂಡಿದ್ದಾರೆ. ಅದೇ ಬೆಂಕಿ ಎಲ್‌ಪಿಜಿ ಸಿಲಿಂಡರ್ ಶೇಖರಿಸಿಟ್ಟಿದ್ದ ಜಾಗಕ್ಕೂ ಪಸರಿಸಿ ನಾಲ್ಕು ಸಿಲಿಂಡರ್ ಸ್ಫೋಟ ಘಟನೆ ಇಂದೋರ್‌ನಲ್ಲಿ ) ನಡೆದಿದೆ. ಇಂದು (ಮಾ.18) ಬೆಳಗಿನ ಜಾವ 4:00ರ ಸುಮಾರಿಗೆ ಇಂದೋರ್‌ನ ಬಂಗಾಳಿ ಸ್ಕ್ವೇರ್ ಬಳಿಯ ವಸತಿ ಕಟ್ಟಡವೊಂದರ ಬಳಿ ಅವಘಡ ಸಂಭವಿಸಿದೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ರಾತ್ರಿಯಿಡೀ ಚಾರ್ಜ್ ಮಾಡಲು ಎಲೆಕ್ಟ್ರಿಕ್ ಕಾರನ್ನು ಪ್ಲಗ್ ಇನ್ ಮಾಡಲಾಗಿತ್ತು. ಈ ವೇಳೆ ಏಕಾಏಕಿ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಬೆಂಕಿ ಮನೆಯೊಳಗೆ ಸಂಗ್ರಹಿಸಿದ್ದ ಎಲ್‌ಪಿಜಿ ಸಿಲಿಂಡರ್‌ಗಳಿಗೂ ಹಬ್ಬಿದ್ದು, ನಾಲ್ಕು ಸಿಲಿಂಡರ್ ಸ್ಫೋಟಗೊಂಡಿದೆ.
ಸಿಲಿಂಡರ್ ಸ್ಫೋಟದಿಂದ ಬೆಂಕಿ ಪ್ರಮಾಣ ಹೆಚ್ಚಾಗಿ ಮೂರು ಅಂತಸ್ತಿಗೂ ಹರಡಿಕೊಂಡಿದೆ. ಭಾರೀ ಬೆಂಕಿಯ ಪರಿಣಾಮ ಏಳು ಜನ ಸಜೀವ ದಹನಗೊಂಡಿದ್ದಾರೆ. ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸುವಲ್ಲಿ ತೊಡಗಿಕೊಂಡರು. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವ ಮುನ್ನ ಅಲ್ಲಿನ ಸ್ಥಳೀಯರು ಮೂವರನ್ನು ರಕ್ಷಿಸಿದ್ದರು. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!