ಉದಯವಾಹಿನಿ, ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ಶೃಂಗೇರಿಯ ಕೆರೆಕಟ್ಟೆ ವಲಯದ ಮಾಣಿಕ್ಯಬೆಟ್ಡ, ವಾಲೀಕುಂಜಗಿರಿ ಸಾಲಿನ 25ಕ್ಕೂ ಹೆಚ್ಚು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಬಿದ್ದಿರುವುದರಿಂದ ನೆಲದಲ್ಲಿ ಗೂಡುಕಟ್ಟುವ ಪಕ್ಷಿಗಳು, ಪ್ರಾಣಿಗಳು, ಅಪರೂಪದ ಸಸ್ಯಸಂಪತ್ತು ಸುಟ್ಟು ಹೋಗಿವೆ. ಈ ಅವಘಡಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅರಣ್ಯ ವೀಕ್ಷಕರ ನೇಮಕ ಮಾಡಿಕೊಳ್ಳದೇ ಇರುವುದೇ ಅನಾಹುತಕ್ಕೆ ಕಾರಣವಾಗಿದೆ. ಬೆಂಕಿ ನಿಯಂತ್ರಣ ರೇಖೆ, ವೀಕ್ಷಣಾ ಗೋಪುರ ಯಾವುದನ್ನೂ ಇಲಾಖೆ ಮಾಡಿಲ್ಲ. ಅರಣ್ಯ ವಾರದಿಂದ ಹೊತ್ತಿ ಉರಿಯುತ್ತಿದ್ದರೂ ಸ್ಥಳಕ್ಕೆ ಯಾರೂ ಭೇಟಿ ನೀಡಿಲ್ಲ ಎಂದು ಪರಿಸರವಾದಿಗಳು ಕಾರ್ಕಳ ಡಿಎಫ್‍ಓ ಶಿವರಾಮ್ ಬಾಬು ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಅರಣ್ಯ ಸಚಿವರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
