
ಉದಯವಾಹಿನಿ, ಬೈರುತ್: ದಕ್ಷಿಣ ಲೆಬನಾನ್‌ನಲ್ಲಿ ಯುದ್ಧದ ಲೈವ್ ವರದಿಗಾರಿಕೆ ಮಾಡುತ್ತಿದ್ದ ರಷ್ಯಾದ ಮಾಧ್ಯಮವೊಂದರ ವರದಿಗಾರನ ಪಕ್ಕದಲ್ಲೇ ಇಸ್ರೇಲ್‌ನ ಕ್ಷಿಪಣಿ ಬಿದ್ದಿದೆ. ಸುಮಾರು 10 ಮೀಟರ್ ಅಂತರದಲ್ಲಿ ಬಾಂಬ್ ಬಿದ್ದಿದ್ದು, ಅದೃಷ್ಟವಶಾತ್ ವರದಿಗಾರ ಹಾಗೂ ಕ್ಯಾಮೆರಾಮೆನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯ ಮಿಲಿಟರಿ ನೆಲೆಯ ಸಮೀಪವಿರುವ ಅಲ್-ಕಾಸ್ಮಿಯಾ ಸೇತುವೆಯ ಬಳಿ ಸ್ಟೀವ್ ಸ್ವೀನಿ ಮತ್ತು ಅವರ ಕ್ಯಾಮೆರಾಮನ್ ಅಲಿ ರಿಡಾ ವರದಿ ಮಾಡುತ್ತಿದ್ದರು. ಈ ವೇಳೆ ಕ್ಷಿಪಣಿ ಬಿದ್ದಿದೆ. ಕ್ಷಿಪಣಿ ಬಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಂಬ್ ಬೀಳುತ್ತಿದ್ದಂತೆ ಸ್ಟೀವ್ ಸ್ವೀನಿ ಮತ್ತು ಕ್ಯಾಮೆರಾಮನ್ ಪಾರಾಗಲು ಅಲ್ಲಿಂದ ಓಡಿದ್ದಾರೆ. ಆದರೆ ದಾಳಿಯಲ್ಲಿ ಅವರಿಬ್ಬರಿಗೂ ಗಾಯಗಳಾಗಿವೆ. ಗಾಯಾಳು ರಿಪೋರ್ಟರ್ ಹಾಗೂ ಕ್ಯಾಮೆರಾಮೆನ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಷ್ಯಾದ ಚಾನೆಲ್ ಆರ್‌ಟಿ ವರದಿ ಮಾಡಿದೆ.
ಎಕ್ಸ್‌ನಲ್ಲಿ ಹಂಚಿಕೊಂಡ ವೀಡಿಯೋದಲ್ಲಿ ವೈದ್ಯರು ಸ್ವೀನಿಯವರ ತೋಳಿನಿಂದ ಲೋಹದ ಚೂರುಗಳನ್ನು ತೆಗೆದುಹಾಕುತ್ತಿರುವುದನ್ನು ಕಾಣಬಹುದಾಗಿದೆ. ಇನ್ನೊಂದು ವೀಡಿಯೋದಲ್ಲಿ ರಿಡಾ ಅವರು ನಾವು ಮಾಧ್ಯಮ ಪ್ರತಿನಿಧಿಗಳ ಸಮವಸ್ತ್ರ ಧರಿಸಿದ್ದರೂ ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್-ಕಾಸ್ಮಿಯಾ ಸೇತುವೆ ಲಿಟಾನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಪ್ರಮುಖ ಸ್ಥಳದಲ್ಲಿ ಕಳೆದ ಕೆಲವು ದಿನಗಳಿಂದ ಇಸ್ರೇಲಿ ಪಡೆಗಳು ಬೃಹತ್ ದಾಳಿ ನಡೆಸುತ್ತಿವೆ. ಈ ಪ್ರದೇಶದೊಂದಿಗೆ ದೇಶದ ಉಳಿದ ಭಾಗಗಳನ್ನು ಸಂಪರ್ಕಿಸುವ ಸೇತುವೆಗಳನ್ನು ಇಸ್ರೇಲ್ ನಾಶಪಡಿಸಿದೆ. ಇರಾನ್ ಬೆಂಬಲಿತ ಗುಂಪು ಹೆಜ್ಬೊಲ್ಲಾ ಈ ಸೇತುವೆಗಳನ್ನು ಬಳಸಿ ಶಸ್ತ್ರಾಸ್ತ್ರಗಳನ್ನು ಸಾಗಿತ್ತಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.
