ಉದಯವಾಹಿನಿ, ನವದೆಹಲಿ: ನಿಜವಾಗಿಯೂ ನಮಗೆ, ನಮ್ಮ ಪಕ್ಷಕ್ಕೆ ಕಾಂಗ್ರೆಸ್‌ನಿಂದ ದ್ರೋಹ ಆಗಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ತಿರುಗೇಟು ನೀಡಿದರು.ಕಾಂಗ್ರೆಸ್ ಜೊತೆ ಪ್ರೀತಿ ಹೊಂದಿದ್ದರು, ಮೋದಿ ಅವರ ಜೊತೆ ಮದುವೆಯಾದರು ಎಂದು ತಮ್ಮ ಬಗ್ಗೆ ಟೀಕೆ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆಯಲ್ಲಿಯೇ ತಿರುಗೇಟು ನೀಡಿದ ಅವರು ನಾನು ಸದನದಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ ಖರ್ಗೆ ಅವರು ಈ ವಿಷಯ ಪ್ರಸ್ತಾಪಿಸಿ, ಮಾತನಾಡಿದ್ದಾರೆ. ನಾನೇನೂ ಅವರಿಗೆ, ಅವರ ಪಕ್ಷಕ್ಕೆ ದ್ರೋಹ ಬಗೆದಿದ್ದೇನೆ ಎಂದು ಅರ್ಥ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ಆದರೆ, ನಿಜವಾಗಿಯೂ ಕಾಂಗ್ರೆಸ್ ಪಕ್ಷದಿಂದ ದ್ರೋಹ ಆಗಿರುವುದು ನಮಗೆ, ನಮ್ಮ ಪಕ್ಷಕ್ಕೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಪಕ್ಷವು ನಮ್ಮ ಪಕ್ಷಕ್ಕೆ ಒಂದಲ್ಲ, ಎರಡಲ್ಲ.. ಅನೇಕ ಬಾರಿ ದ್ರೋಹ ಮಾಡಿದೆ. ಅದರ ಬಗ್ಗೆ ನಾನು ಸಾಕ್ಷಿ ಸಹಿತವಾಗಿ ಮಾತನಾಡಬಲ್ಲೆ. ಅದೆಲ್ಲವನ್ನು ಮರೆಮಾಚಲು ಖರ್ಗೆ ಅವರು ನನ್ನ ವಿಷಯ ಎಳೆದು ತಂದಿದ್ದಾರೆ. ಅದಕ್ಕೆ ನಾನು ಉತ್ತರ ನೀಡಬೇಕಿದೆ. ಈ ಸಂದರ್ಭದಲ್ಲಿ ತಮ್ಮ ಕಾಲದ ಕರ್ನಾಟಕ ರಾಜ್ಯದ ರಾಜಕಾರಣವನ್ನು ಮೆಲುಕು ಹಾಕಿದ ಅವರು, ನಿಜಲಿಂಗಪ್ಪ, ದೇವರಾಜ ಅರಸು, ಬಂಗಾರಪ್ಪ ಅವರಿಗೆ ಏನಾಯಿತು ಎಂಬುದು ಮಲ್ಲಿಕಾರ್ಜುನ ಖರ್ಗೆ ಅವರಿಗೂ ಗೊತ್ತಿದೆ. ಅವರು ಹೇಗೆ ಅಧಿಕಾರ ಕಳೆದುಕೊಂಡರು ಎಂಬುದನ್ನು ಖರ್ಗೆ ಅವರು ಹೇಳಬೇಕಾಗುತ್ತದೆ. ಅವರೆಲ್ಲರೂ ಅಧಿಕಾರ ಕಳೆದುಕೊಂಡಿದ್ದಕ್ಕೆ ನಾವು ಸಾಕ್ಷಿಗಳಾಗಿದ್ದೆವು ಎಂದು ಟೀಕಾ ಪ್ರಹಾರ ನಡೆಸಿದರು.
ಮಲ್ಲಿಕಾರ್ಜುನ ಖರ್ಗೆ ಒಳ್ಳೆಯ ವ್ಯಕ್ತಿ. ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕೆಂದು ನಾವೆಲ್ಲರೂ ಆಶಿಸಿದ್ದೆವು. ಆದರೆ, ಅವರ ಸ್ವಂತ ಪಕ್ಷವೇ ಅವರನ್ನು ಸಿಎಂ ಆಗಲು ಬಿಡಲಿಲ್ಲ ಎಂಬ ಸಂಗತಿಯನ್ನು ಉಲ್ಲೇಖಿಸಿದರು. ನಿಜ ಹೇಳಬೇಕು ಎಂದರೆ, ನನ್ನ ಮತ್ತು ನರೇಂದ್ರ ಮೋದಿ ಅವರ ನಡುವಿನ ಮೈತ್ರಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಶುರುವಾಗಿದ್ದಲ್ಲ. 2014ರಲ್ಲಿಯೇ ಆರಂಭವಾಯಿತು. ನಾನು ಅವತ್ತಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ವಿರುದ್ಧ ಪ್ರಚಾರ ನಡೆಸಿದ್ದೆ. ಅವರ ಬಗ್ಗೆ ಅತ್ಯಂತ ಕಟುವಾಗಿ ಮಾತನಾಡಿದ್ದೆ. ಅವರು ಅಧಿಕಾರಕ್ಕೆ ಬಂದರೆ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದೆ. ಬಳಿಕ ಅವರು ಗೆದ್ದ ನಂತರ ನಾನು ನಿಜವಾಗಿಯೂ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದೆ. ಆದರೆ, ಮೋದಿ ಅವರು ಹಾಗೆ ಮಾಡಬೇಡಿ ಎಂದು ತಡೆದರು. ನಾನು ಅವತ್ತಿನ ಅವರ ನಡಳಿವಳಿಕೆಯಿಂದ ಪ್ರಭಾವಿತನಾದೆ ಎಂದು ಹೇಳಿದರು.
