ಉದಯವಾಹಿನಿ, ಶ್ರೀನಗರ: ಇರಾನ್‌ನ ಯುದ್ಧಪೀಡಿತ ಜನರ ನೆರವಿಗೆ ಜಮ್ಮು-ಕಾಶ್ಮೀರದ ಮುಸ್ಲಿಂ ಕುಟುಂಬಗಳು ನಿಂತಿವೆ. ಇರಾನ್‌ ಸಂತ್ರಸ್ತರಿಗೆ ಸಹಾಯ ಮಾಡಲು ಬೃಹತ್‌ ದೇಣಿಗೆ ಅಭಿಯಾನವನ್ನು ಕಾಶ್ಮೀರದಲ್ಲಿ ನಡೆಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿವಿಧ ಮೂಲೆಗಳಲ್ಲಿ, ವಿಶೇಷವಾಗಿ ಶಿಯಾ ಬಹುಸಂಖ್ಯಾತ ಜಿಲ್ಲೆಗಳಾದ ಬುಡ್ಗಾಮ್ ಮತ್ತು ಬಾರಾಮುಲ್ಲಾದಲ್ಲಿ ಜನರು ದೇಣಿಗೆ ಸಂಗ್ರಹ ಅಭಿಯಾನ ಪ್ರಾರಂಭಿಸಿದ್ದಾರೆ. ತಮ್ಮ ಮನೆಯಲ್ಲಿರುವ ಚಿನ್ನ, ನಗದು, ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿ, ಇರಾನ್‌ ಸಂತ್ರಸ್ತರಿಗೆ ಕಳುಹಿಸುತ್ತಿದ್ದಾರೆ.

ಈದ್ ಹಬ್ಬದ ನಂತರ ಭಾನುವಾರ ನಡೆದ ದೇಣಿಗೆ ಅಭಿಯಾನದಲ್ಲಿ ಜನರು ನಗದು ಮಾತ್ರವಲ್ಲದೇ ಚಿನ್ನಾಭರಣ, ಜಾನುವಾರುಗಳು ಮತ್ತು ಸಾಂಪ್ರದಾಯಿಕ ತಾಮ್ರದ ಪಾತ್ರೆಗಳನ್ನು ಸಹ ದೇಣಿಗೆಯಾಗಿ ನೀಡುತ್ತಿದ್ದಾರೆ. ಮಕ್ಕಳು ತಮ್ಮ ಪಿಗ್ಗಿ ಬ್ಯಾಂಕ್‌ ಹಣವನ್ನು ಕೂಡ ನೀಡುತ್ತಿದ್ದಾರೆ. ಮಹಿಳೆಯರು ಚಿನ್ನ ಮತ್ತು ನಗದನ್ನು ನೀಡಿದ್ದಾರೆ. ಸುಮಾರು ಮೂರು ವರ್ಷಗಳಿಂದ ಸಂರಕ್ಷಿಸಿಟ್ಟಿದ್ದ ಚಿನ್ನವನ್ನು ವೃದ್ಧೆಯೊಬ್ಬರು ಇರಾನ್‌ ಜನತೆಗಾಗಿ ದಾನ ಮಾಡಿದ್ದಾರೆ. ಈ ಬಗ್ಗೆ ಭಾರತದಲ್ಲಿರುವ ಇರಾನಿನ ರಾಯಭಾರ ಕಚೇರಿ ಮಾಹಿತಿ ಹಂಚಿಕೊಂಡಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ತೊಂದರೆಗೊಳಗಾದವರಿಗೆ ದೇಣಿಗೆ ಸಂಗ್ರಹಿಸಲು ಜನರು ಮನೆ ಮನೆಗೆ ತೆರಳಿದ್ದಾರೆ. ಶ್ರೀನಗರದ ರೈನಾವರಿ ಪ್ರದೇಶದ ನಿವಾಸಿ ಐಜಾಜ್ ಅಹ್ಮದ್, ‘ಇಸ್ರೇಲ್‌ನ ಜಿಯೋನಿಸ್ಟ್ ಆಡಳಿತ ಮತ್ತು ಅದರ ಬೆಂಬಲಿಗರು ಇರಾನ್ ಮೇಲೆ ಹೇರಿದ ಈ ಕಾನೂನುಬಾಹಿರ ಯುದ್ಧದಿಂದ ಭಾರಿ ವಿನಾಶ ಉಂಟಾಗಿದೆ. ನಾಗರಿಕ ಜಗತ್ತು ಕನಿಷ್ಠವಾಗಿ ಮಾಡಬಹುದಾದದ್ದು, ಇರಾನ್‌ನಲ್ಲಿ ಯುದ್ಧದಿಂದ ಬಳಲುತ್ತಿರುವ ಜನರಿಗೆ ಸಹಾಯ ಕಳುಹಿಸುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!