ಉದಯವಾಹಿನಿ, ಚಿಕ್ಕಮಗಳೂರು: ಪಿಯುಸಿ ಓದುತ್ತಿರುವ ಹುಡುಗನಿಗೆ ಎಸ್‌ಎಸ್‌ಎಲ್‌ಸಿ ಹುಡುಗಿ ಮೇಲೆ ಪ್ರೇಮಾಂಕುರವಾಗಿ , ಇಬ್ಬರು ಒಬ್ಬರನ್ನೊಬ್ನರು ಪ್ರೀತಿಸುತ್ತಿದ್ದು, ಇಬ್ಬರ ಪ್ರೇಮಪ್ರಸಂಗ ಪೊಲೀಸ್ ಠಾಣೆಯಲ್ಲಿ ದೂರಿಗೆ ಪ್ರತಿದೂರು ದಾಖಲಾಗುವ ಮಟ್ಟಕ್ಕೆ ಬಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದ ಹುಡುಗ ಹಾಗೂ ಹುಡುಗಿ ಮೂಡಿಗೆರೆ ಪಟ್ಟಣಕ್ಕೆ ಓದಲು ಬರುವಾಗ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಈ ಬಗ್ಗೆ ಹಿಂದೂ ಸಂಘಟನೆ ಕಾರ್ಯಕರ್ತರು ಇದು ಲವ್ ಜಿಹಾದ್ ಎಂದು ಆರೋಪಿಸಿ ಅಪ್ರಾಪ್ತ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ಅಪ್ರಾಪ್ತ ಯುವಕ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೂವರು ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ದೂರು ನೀಡಿದ್ದು, ಹಿಂದೂ ಸಂಘಟನೆ ಕಾರ್ಯಕರ್ತ ಸುದೇವ್ ಸೇರಿ ಮೂವರ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಅಪ್ರಾಪ್ತ ಹುಡುಗ-ಹುಡುಗಿ ನಡುವಿನ ಪ್ರೇಮ ವಿಚಾರ ಮೂಡಿಗೆರೆ ಪಟ್ಣಣದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣಕ್ಕೆ ಕಾರಣವಾಗಿದೆ. ಇತ್ತ ಅಪ್ರಾಪ್ತ ಬಾಲಕಿಯ ತಂದೆ ಕೂಡ ಅಪ್ರಾಪ್ತ ಪ್ರೇಮಿ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಓದುವ ವಯಸ್ಸಿನಲ್ಲಿ ಅಪ್ರಾಪ್ತರ ಪ್ರೇಮ ಪುರಾಣ ಇದೀಗ ಪೊಲೀಸ್ ಠಾಣೆಯಲ್ಲಿ ದೂರಿಗೆ ಪ್ರತಿದೂರು ದಾಖಲಾಗುವಂತಾಗಿದೆ. ಎರಡೂ ಕಡೆಯಿಂದ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
