ಉದಯವಾಹಿನಿ, ಬರ್‌ಗಢ(ಒಡಿಶಾ): ಹಸುವಿನ ಸಗಣಿಯಿಂದ ಪರಿಸರಸ್ನೇಹಿ ಬಣ್ಣ ಉತ್ಪಾದಿಸುವ ಮೂಲಕ ಗೃಹಿಣಿಯೊಬ್ಬರು ಕೋಟ್ಯಧಿಪತಿಯಾಗಿದ್ದಾರೆ. ಒಡಿಶಾದ ಬರ್‌ಗಢ ಜಿಲ್ಲೆಯ ದುರ್ಗಾ ಪ್ರಿಯದರ್ಶಿನಿ ಇಂತಹದ್ದೊಂದು ಹೊಸ ಪ್ರಯೋಗದ ಮೂಲಕ ಉದ್ಯಮಿಯಾಗಿ ಗುರುತಿಸಿಕೊಂಡವರು. ಇವರ ಪತಿ ಯೋಗೇಶ್ವರ್ ಸಾಹು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಪ್ರಿಯದರ್ಶಿನಿ ಗೃಹಿಣಿಯಾಗಿ ತಮ್ಮ ಸಂಸಾರದ ನೊಗ ಹೊತ್ತು ಮುನ್ನಡೆಸಿಕೊಂಡು ಹೋಗುತ್ತಿದ್ದರು. ಆದರೆ, ಜೀವನದಲ್ಲಿ ಏನಾದರೂ ಸಾಧಿಸಿ ತೋರಿಸಬೇಕು ಎಂಬ ಛಲದಿಂದ ಪ್ರಿಯದರ್ಶಿನಿ ಉದ್ಯಮಕ್ಕೆ ಧುಮುಕಿದ್ದರು. ಅಂದುಕೊಂಡಂತೆ ತಮ್ಮದೇಯಾದ ಪೇಂಟ್ ಕಂಪನಿ ತೆರೆದಿದ್ದು, ವರ್ಷಕ್ಕೆ ಒಂದು ಕೋಟಿ ರೂಪಾಯಿಗಳ ವ್ಯವಹಾರ ಮಾಡುತ್ತಿದ್ದಾರೆ. ತಮ್ಮ ಕಂಪನಿಯಲ್ಲಿ 30 ಜನರಿಗೆ ಉದ್ಯೋಗ ನೀಡಿದ್ದು ಅವರನ್ನು ಸ್ವಾವಲಂಬಿಯನ್ನಾಗಿ ಮಾಡಿದ ಕೀರ್ತಿ ಪ್ರಿಯದರ್ಶಿನಿ ಅವರಿಗೆ ಸಲ್ಲುತ್ತದೆ.
ಆರಂಭದಲ್ಲಿ ಎದುರಾದ ಅಡೆತಡೆ, ಕಷ್ಟ – ನಷ್ಟಗಳನ್ನು ನಿವಾರಿಸಿಕೊಂಡು ಈಗ ಬರ್ಗಢ ನಗರದ ಅಂಬಾಪಾಲಿಯಲ್ಲಿ ತಮ್ಮದೊಂದು ಕಾರ್ಪೊರೇಟ್ ಕಚೇರಿ ತೆರೆದಿದ್ದಾರೆ. ಸೊಹೆಲಾ ಬ್ಲಾಕ್‌ನ ಪಿಪಾಲ್ಖುಂಟಾ ಗ್ರಾಮ ಪಂಚಾಯತ್‌ನ ಕಂಗನ್‌ನಲ್ಲಿ ಹಸುವಿನ ಸಗಣಿಯಿಂದ ಪರಿಸರಸ್ನೇಹಿ ಬಣ್ಣ ಉತ್ಪಾದಿಸುವ ಕೈಗಾರಿಕೆ ಪ್ರಾರಂಭಿಸಿ ಮಾದರಿಯಾಗಿದ್ದಾರೆ. ಅಕ್ಕಪಕ್ಕದ ಮೂರ್ನಾಲ್ಕು ಹಳ್ಳಿಗಳ ಸುಮಾರು 40 ರೈತರು ಈ ಕಾರ್ಖಾನೆಗೆ ಹಸುವಿನ ಸಗಣಿ ನೀಡುತ್ತಿದ್ದು, ಅದರಿಂದ ಇಲ್ಲಿ ಪರಿಸರಸ್ನೇಹಿ ಬಣ್ಣವನ್ನು ತಯಾರಿಸಲಾಗುತ್ತದೆ.
ಉದ್ಯಮದ ಕುರಿತು ಪ್ರತಿಕ್ರಿಯಿಸಿರುವ ಪ್ರಿಯದರ್ಶಿನಿ, ನಾನು ಹುಟ್ಟಿ ಬೆಳೆದಿದ್ದು ಜಾರ್ಖಂಡ್ ರಾಜ್ಯದ ಸಿಮ್ಡೇಗಾದಲ್ಲಿ. 2007ರಲ್ಲಿ ರಾಂಚಿ ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಪದವಿ ಪಡೆದೆ. ಅದೇ ವಿವಿಯಲ್ಲಿ ಸ್ನಾತಕೋತ್ತರ ಪದವಿ ಮಾಡಿದೆ. 2009ರಲ್ಲಿ ಬರ್ಗಢ ನಗರದ ಚಾರ್ಟರ್ಡ್ ಅಕೌಂಟೆಂಟ್ ಯೋಗೇಶ್ವರ್ ಸಾಹು ಅವರೊಂದಿಗೆ ನಮ್ಮ ತಂದೆ – ತಾಯಿ ನನ್ನ ವಿವಾಹ ಮಾಡಿಕೊಟ್ಟರು. ಪತಿ ಕೆಲಸದ ನಿಮಿತ್ತ ಎಲ್ಲೆಲ್ಲಿಗೆ ತೆರಳುತ್ತಿದ್ದರೋ ಅಲ್ಲಿಗೆ ತೆರಳುತ್ತಿದ್ದೆ. 9 ವರ್ಷಗಳ ಕಾಲ ಗೃಹಿಣಿಯಾಗಿ ದೇಶದ ವಿವಿಧ ನಗರಗಳಲ್ಲಿ ಹೀಗೆ ಪತಿಯೊಂದಿಗೆ ಓಡಾಡಿದೆ. ಒಂದು ದಿನ ತನ್ನ ಜೀವನ ಕಂಡು ನನಗೆ ಬೇಸರ ಅನ್ನಿಸಿತು. ಆಗ ಆಲೋಚನೆ ಮಾಡಲು ಶುರು ಮಾಡಿದೆ. ಕಿರಣ್ ಬೇಡಿ ಅವರಂತಹ ಸಾಧಕರನ್ನು ಕಂಡು ನನ್ನಲ್ಲಿಯೂ ಛಲ ಹುಟ್ಟಿಕೊಂಡಿತು ಎಂದು ತಮ್ಮ ಉದ್ಯಮ ಆರಂಭದ ದಿನಗಳನ್ನು ನೆನಪಿಸಿಕೊಂಡರು.
