ಉದಯವಾಹಿನಿ ಪಾವಗಡ: ಬೆಂಗಳೂರಿನ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ, ಶ್ರೀ ರಾಮಕೃಷ್ಣ ಗ್ರಾಮಾಂತರ ಹೃದಯ ಚಿಕಿತ್ಸಾ ಕೇಂದ್ರ, ಎಂ.ಎಸ್.ರಾಮಯ್ಯ ನಾರಾಯಣ ಹೆಲ್ತ್, ಶ್ರೀ ಶಂಕರ್ ಕ್ಯಾನ್ಸರ್ ಆಸ್ಪತ್ರೆ, ಮಿಂಟೋ ಕಣ್ಣಾಸ್ಪತ್ರೆ, ಡಾ.ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಇವರ ಸಹಯೋಗದೊಂದಿಗೆ ಪಟ್ಟಣದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಕಾರ್ಯಕ್ರಮವನ್ನು ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಜಪಾನಂದ ಸ್ವಾಮಿಜೀ ಅವರು ಉದ್ಘಾಟಿಸಿದರು.ನಂತರ ಅವರು ಮಾತನಾಡಿ, ಈಗಿನ ಕಾಲಘಟ್ಟದಲ್ಲಿ ಮನುಷ್ಯ ತಮ್ಮ ಒತ್ತಡ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ, ಮಧುಮೇಹ ಮಾನಸಿಕ ಒತ್ತಡ ಸೇರಿದಂತೆ ಹಲವಾರು ಕಾಯಿಲೆಗಳನ್ನು ಹೊಂದಿರುತ್ತಾರೆ. ಕಾಲ ಕಾಲಕ್ಕೆ ತಪಾಸಣೆ ಹಾಗೂ ವೈದ್ಯರ ಚಿಕಿತ್ಸೆಯಿಂದ ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಗುಣಪಡಿಸಬಹುದು ಎಂದ ಅವರು, ಪಾವಗಡದ ಗ್ರಾಮಾಂತರ ಭಾಗದ ಜನರು ಇದರ ಸದುಪಯೋಗ ಪಡೆಯಲೆಂದೆ ಈ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕೆಂದು ಹೇಳಿದರು.
ಶಾಸಕ ಹೆಚ್.ವಿ.ವೆಂಕಟೇಶ್ ಮಾತನಾಡಿ, ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಈ ವೇಳೆ 80 ಮಂದಿ ಪುರಸಭೆಯ ಪೌರ ಕಾರ್ಮಿಕರು, ನೂರಾರು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ಪುರಸಭೆ ಸದಸ್ಯರಾದ ತೆಂಗಿನಕಾಯಿ ರವಿ, ಬಾಲಸುಬ್ರಮಣಿ, ಮೊಹಮ್ಮದ್ ಇಮ್ರಾನ್, ಗೊರ್ತಿ ನಾಗರಾಜು, ಯುವ ಮುಖಂಡರಾದ ಎ.ಕಿರಣ್, ಅವಿನಾಶ್, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಶಂಷುದ್ದೀನ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!