ಉದಯವಾಹಿನಿ, ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): 2029ರ ಸಾರ್ವತ್ರಿಕ ಚುನಾವಣೆಯ ವೇಳೆಗೆ ರಾಜಕೀಯದಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸಭಾ ಮತ್ತು ವಿಧಾನಸಭಾ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳದ ಯೋಜನೆ ಹೊಂದಿದೆ.
ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಚಿತ್ರಣ ಗಮನಾರ್ಹವಾಗಿ ಮರುರೂಪಗೊಳ್ಳಲಿದ್ದು, ಸ್ಥಾನಗಳ ಸಂಖ್ಯೆಯಲ್ಲಿ ಏರಿಕೆಯಾಗಲಿದೆ.ಅಧಿಕಾರಿಗಳು ಹೇಳುವ ಪ್ರಕಾರ, ಶಾಸಕಾಂಗಗಳ ಬಲವನ್ನು ಶೇ.50ರಷ್ಟು ಏರಿಸುವ ಯೋಜನೆಯನ್ನು ಹೊಂದಿದ್ದು, ಇದರ ಪರಿಣಾಮ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಸ್ಥಾನಗಳು 90ರಿಂದ 135ಕ್ಕೆ ಹೆಚ್ಚಳವಾಗಲಿದೆ. ಇದರಿಂದಾಗಿ ಲೋಕಸಭಾ ಸ್ಥಾನ ಐದರಿಂದ ಏಳು ಅಥವಾ ಎಂಟು ಸ್ಥಾನಗಳಿಗೆ ಏರಿಕೆಯಾಗಬಹುದು.
ಈ ಪ್ರಸ್ತಾವದ ಅಡಿಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನ ಮೀಸಲಾಗಿದೆ. ಇದು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಸುಮಾರು 45 ಸ್ಥಾನಗಳು ಮೀಸಲಾಗುವಂತೆ ಆಗುತ್ತದೆ. ಇದರ ಸಂಖ್ಯೆ ಲೋಕಸಭೆಯಲ್ಲಿ, ಒಟ್ಟು ಏಳಕ್ಕೇರಿದರೆ ಎರಡು ಸ್ಥಾನಗಳು ಅಥವಾ ಎಂಟಕ್ಕೆ ತಲುಪಿದರೆ ಮೂರು ಸ್ಥಾನಗಳನ್ನು ಕಾಯ್ದಿರಿಸಬಹುದು.
ಈ ಪ್ರಸ್ತಾವನೆಯ ಬಗ್ಗೆ ರಾಜಕೀಯ ಒಮ್ಮತ ಮೂಡಿಸಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ ಸಂಬಂಧ ಲೋಕಸಭೆಯಲ್ಲಿ ವಿಪಕ್ಷ ಸದಸ್ಯರು ಸೇರಿದಂತೆ ಹಲವಾರು ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದೆ. ಆದರೆ, ಇದುವರೆಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸಂಪರ್ಕಕ್ಕೆ ಬಂದಿಲ್ಲ. ಈ ಕುರಿತು ಮಾತನಾಡಿರುವ ಎನ್ಸಿಯ ರಾಜ್ಯಸಭಾ ಸಂಸದ ಚೌಧರಿ ಮುಹಮ್ಮದ್ ರಂಜಾನ್, ತಮ್ಮೊಂದಿಗೆ ಯಾವುದೇ ಸಮಾಲೋಚನೆ ನಡೆದಿಲ್ಲ ಎಂದಿದ್ದಾರೆ.
ಇದೇ ವೇಳೆ, ಈ ವಿಚಾರವನ್ನು ಇಂಡಿಯಾ ಒಕ್ಕೂಟ ಸಭೆಯಲ್ಲಿ ಚರ್ಚಿಸಿದ್ದಾಗಿ ತಿಳಿಸಿದರು. ಸಭೆಯಲ್ಲಿದ್ದ ನಾಯಕರು ಸರ್ವಪಕ್ಷ ಚರ್ಚೆಗೆ ಕರೆಗೆ ಒತ್ತಾಯಿಸಿದ್ದಾರೆ. ಈ ಕುರಿತು ಕೇಂದ್ರ ಸಭೆ ಕರೆದು ಪ್ರಸ್ತಾವಿತ ಕಾನೂನಿನ ವಿವರಗಳನ್ನು ಸ್ಪಷ್ಟಪಡಿಸಬೇಕು ಎಂದರು.ಪ್ರಸ್ತಾವನೆಗೆ ಕಾನೂನಿನ ಮೂಲಕ ಅನುಮೋದನೆ ದೊರೆತರೆ, 2029ರ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗಳಿಗೂ ಮೀಸಲಾತಿ ಅನ್ವಯಿಸಲಿದೆ. ಪ್ರಸ್ತುತ ರಾಜ್ಯದ ವಿಧಾನಸಭೆಯ ಅವಧಿ 2029ರ ನವೆಂಬರ್ 3ಗೆ ಕೊನೆಗೊಳ್ಳಲಿದೆ.ಕಾನೂನು ಅಂಗೀಕಾರವಾದ ನಂತರ, ಕೇಂದ್ರವು ಕ್ಷೇತ್ರಗಳ ಗಡಿಗಳನ್ನು ಪುನರ್ರಚಿಸಲು ಒಂದು ಡಿಲಿಮಿಟೇಶನ್ ಆಯೋಗವನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಸದ್ಯ ಕಾನೂನು ಚೌಕಟ್ಟಿನ ಮಹಿಳಾ ಮೀಸಲಾತಿ 2027ರ ಜನಗಣತಿ ಮತ್ತು ನವೀಕರಿಸಿದ ಜನಸಂಖ್ಯಾ ದತ್ತಾಂಶವನ್ನು ಆಧರಿಸಿದ ಹೊಸ ಗಡಿ ನಿರ್ಣಯದ ನಂತರವೇ ಜಾರಿಗೆ ಬರಲಿದೆ.
