
ಉದಯವಾಹಿನಿ, ರಾಮನಗರ: ಇರಾನ್ – ಇಸ್ರೇಲ್ ನಡುವಿನ ಯುದ್ಧದ ಬಿಸಿ ತೈಲ ಹಾಗೂ ಗ್ಯಾಸ್ ಮೇಲೆ ತಟ್ಟಿದೆ. ಸಿಲಿಂಡರ್‌ಗಳಿಗಾಗಿ ಆಯಾ ವಿತರಕ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಸಿಲಿಂಡರ್ ಪಡೆಯುತ್ತಿದ್ದಾರೆ. ಆದರೆ ಬಿಡದಿ ಭಾಗದ ಹಲವು ಗ್ರಾಮಗಳು ಸಿಲಿಂಡರ್ ಜಂಜಾಟದಿಂದ ಮುಕ್ತವಾಗಿ ದಿನದ 24 ಗಂಟೆ ಗ್ಯಾಸ್ ಬಳಸುತ್ತಿದ್ದಾರೆ.
ಹೌದು, ಬಿಡದಿ ಭಾಗದ 10 ಗ್ರಾಮಗಳು ಗ್ಯಾಸ್ ಸಿಲಿಂಡರ್‌ಗಳನ್ನ ಉಪಯೋಗಿಸುವುದನ್ನ ಬಿಟ್ಟು ಪೈಪ್‌ಲೈನ್ ಮೂಲಕ ಗ್ಯಾಸ್ ಬಳಸುತ್ತಿದ್ದಾರೆ. ಮನೆ ಮನೆಗೆ ಗ್ಯಾಸ್ ಪೈಪ್‌ಲೈನ್ ಮಾಡಿ ಗೈಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಸಹಭಾಗಿತ್ವದಲ್ಲಿ ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿ. ಸಂಸ್ಥೆ ನಿರಂತರವಾಗಿ ಗ್ಯಾಸ್ ಪೂರೈಕೆ ಮಾಡುತ್ತಿದೆ. ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿ. ಕಂಪನಿಯವರು ಈಗಾಗಲೇ ಬಿಡದಿ ಭಾಗದ ಹಲವು ಕಡೆ ಅಂಡರ್ ಗ್ಯಾಸ್ ಪೈಪ್‌ಲೈನ್ ಮಾಡಿ ಮನೆ ಮನೆಗೆ ಗ್ಯಾಸ್ ಸಂಪರ್ಕ ನೀಡಿದ್ದಾರೆ. ಛತ್ರ, ಗೊಲ್ಲಹಳ್ಳಿ, ಬಾನಂದೂರು, ಇಟ್ಟಮಾಡು, ರಾಮನಹಳ್ಳಿ, ಅಬ್ಬನಕುಪ್ಪೆ, ವೃಷಬಾವಾತಿಪುರ, ಜೋಗರದೊಡ್ಡಿ ಗ್ರಾಮಗಳಲ್ಲಿ ಪೈಪ್‌ಲೈನ್ ಮೂಲಕ ಯಾವುದೇ ಅಡೆತಡೆ ಇಲ್ಲದೆ ಮನೆ ಮನೆಗೆ ಗ್ಯಾಸ್ ಕನೆಕ್ಷನ್ ನೀಡಲಾಗಿದೆ. ಗ್ಯಾಸ್ ಸಂಪರ್ಕ ಪಡೆದವರು ಸಿಲಿಂಡರ್ ಬುಕ್ಕಿಂಗ್ ಮಾಡುವುದನ್ನೇ ಬಿಟ್ಟಿದ್ದಾರೆ. ದಿನದ 24 ತಾಸು ಗ್ಯಾಸ್ ಪೂರೈಕೆ ಆಗುತ್ತಿದೆ. ಇಲ್ಲಿಯವರೆಗೂ ಗ್ಯಾಸ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎನ್ನುತ್ತಾರೆ ಇಲ್ಲಿನ ಜನರು.
