ಉದಯವಾಹಿನಿ, ವಿಶ್ವಸಂಸ್ಥೆ: ಕಳೆದ 27 ದಿನಗಳಿಂದ ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷವು ಎಲ್ಲ ಮಿತಿಗಳನ್ನು ಮೀರಿದೆ. ತಕ್ಷಣವೇ ಯುದ್ಧದಲ್ಲಿ ಭಾಗಿಯಾಗಿರುವ ಎಲ್ಲ ರಾಷ್ಟ್ರಗಳು ಹಿಂದೆ ಸರಿಯಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಆಗ್ರಹಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸಂಘರ್ಷ ನಡೆಯುತ್ತಿದೆ. ಇದು ಭಾರಿ ಹಾನಿ ತಂದೊಡ್ಡುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ, ರಾಜತಾಂತ್ರಿಕ ಮಾತುಕತೆಗೆ ಮುಂದಾಗಬೇಕು. ಶಾಂತಿ ಸ್ಥಾಪನೆಗಾಗಿ ನನ್ನ ಪರವಾಗಿ ಹಿರಿಯ ರಾಯಭಾರಿಯನ್ನು ನೇಮಿಸಲಾಗುವುದು ಎಂದು ಘೋಷಿಸಿದರು.
ಯುದ್ಧದಿಂದ ಮಾನವಕುಲ ದೀರ್ಘ ಸಮಸ್ಯೆಗಳಿಗೆ ತುತ್ತಾಬೇಕಾಗುತ್ತದೆ. ಜಾಗತಿಕ ಆರ್ಥಿಕತೆಯು ಹಳ್ಳ ಹಿಡಿಯಲಿದೆ. ಈಗಾಗಲೇ ಸಂಘರ್ಷ ತುಂಬಾ ದೂರ ಸಾಗಿ ಬಂದಿದೆ. ಇದಕ್ಕಿಂತಲೂ ಮುಂದೆ ಹೋದಲ್ಲಿ ಹಾನಿ ಘೋರವಾಗಿರಲಿದೆ ಎಂದು ಎಚ್ಚರಿಸಿದರು. ಶಾಂತಿ ಸ್ಥಾಪನೆಗೆ ರಾಯಭಾರಿತ್ವ: ಸಂಘರ್ಷವನ್ನು ಕೊನೆಗೊಳಿಸಲು ವಿಶ್ವಸಂಸ್ಥೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಇದಕ್ಕಾಗಿ ಹಿರಿಯ ರಾಜತಾಂತ್ರಿಕ ಜೀನ್ ಅರ್ನಾಲ್ಟ್ ಅವರನ್ನು ತಮ್ಮ ವೈಯಕ್ತಿಕ ರಾಯಭಾರಿಯಾಗಿ ನೇಮಿಸುತ್ತಿರುವೆ. ಮಧ್ಯಪ್ರಾಚ್ಯದ ಸಂಘರ್ಷ ಬಿಸಿ ಇಡೀ ವಿಶ್ವವನ್ನೇ ಆವರಿಸಿದೆ. ಇದನ್ನು ತಣಿಸಲು ಮತ್ತು ಶಾಂತಿ ಸ್ಥಾಪನೆಗಾಗಿ ಅವರು ಕೆಲಸ ಮಾಡಲಿದ್ದಾರೆ ಎಂದರು.
ಇದಲ್ಲದೆ, ಯುದ್ಧದಲ್ಲಿ ತೊಡಗಿರುವ ಇಸ್ರೇಲ್, ಅಮೆರಿಕ ಮತ್ತು ಇರಾನ್ಗೆ ಕಟು ಎಚ್ಚರಿಕೆ ಸಂದೇಶ ನೀಡಿರುವ ಗುಟೆರೆಸ್, “ಯುದ್ಧ ಕೊನೆಗೊಳಿಸಲು ಇದು ಸಕಾಲ. ಯುದ್ಧದ ಭಾಗವಾಗಿರದ ಕೊಲ್ಲಿ ರಾಷ್ಟ್ರಗಳ ಮೇಲೆ ಇರಾನ್ ದಾಳಿ ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಇರಾನ್ಗೆ ಬುದ್ಧಿವಾದವನ್ನೂ ಅವರು ಹೇಳಿದರು. ವಿಶೇಷವಾಗಿ, ಹಾರ್ಮುಜ್ ಜಲಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ಅದನ್ನು ದೀರ್ಘಕಾಲದವರೆಗೆ ತಡೆಹಿಡಿದರೆ, ತೈಲ, ಅನಿಲ ಮತ್ತು ರಸಗೊಬ್ಬರಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿ, ವಿಶ್ವದ ಎಲ್ಲ ಜನರನ್ನು ಉಸಿರುಗಟ್ಟಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯುದ್ಧದಿಂದ ಹೆಚ್ಚಲಿದೆ ಹಸಿವು: ಜಾಗತಿಕ ಮಟ್ಟದಲ್ಲಿ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆಯೂ ಮಹಾಕಾರ್ಯದರ್ಶಿ ಎಚ್ಚರಿಕೆ ನೀಡಿದ್ದು, ಮಾರುಕಟ್ಟೆಗಳು ಅಸ್ತವ್ಯಸ್ತವಾಗಿವೆ. ಮಾನವೀಯ ಕಾರ್ಯಾಚರಣೆಗಳು ನಿರ್ಬಂಧಕ್ಕೆ ಒಳಪಟ್ಟಿವೆ. ಆರ್ಥಿಕ ಆಘಾತವು ಅತ್ಯಂತ ದುರ್ಬಲ ರಾಷ್ಟ್ರಗಳನ್ನು, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ತೀವ್ರವಾಗಿ ಬಾಧಿಸುತ್ತದೆ ಎಂದು ಅವರು ಹೇಳಿದರು.
ರಸಗೊಬ್ಬರ ಪೂರೈಕೆಯಲ್ಲಿನ ಅಡಚಣೆಯು ಜಾಗತಿಕ ಆಹಾರ ಭದ್ರತೆಗೆ ಬೆದರಿಕೆಯಾಗಿದೆ. ಇಂದು ರಸಗೊಬ್ಬರ ಕೊರತೆ ಉಂಟಾದರೆ, ನಾಳೆ ಹಸಿವು ಹೆಚ್ಚಲಿದೆ. ಇಂಧನ ಬೆಲೆಗಳು ಗಗನಕ್ಕೇರುವುದರಿಂದ ಹಣದುಬ್ಬರ ಮತ್ತು ವಿಶ್ವಾದ್ಯಂತ ಬಡತನ ಹೆಚ್ಚಾಗುತ್ತದೆ ಎಂದು ಅವರು ಎಚ್ಚರಿಸಿದರು.
