ಉದಯವಾಹಿನಿ, ವಾಷಿಂಗ್ಟನ್, ಅಮೆರಿಕ : ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಸೇರಿದಂತೆ ಎಂಟು ಯುದ್ಧಗಳನ್ನು ನಿಲ್ಲಿಸಿದ್ದರಿಂದ, ತಮ್ಮ ಆ ಪರಂಪರೆಯನ್ನು ಮಹಾನ್ ಶಾಂತಿದೂತನಾಗಿಯೇ ಇರಲು ನಾನು ಬಹಳ ಇಷ್ಟಪಡುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಿಯಾಮಿಯಲ್ಲಿ ನಡೆದ ಸೌದಿ ಬೆಂಬಲಿತ ಭವಿಷ್ಯದ ಹೂಡಿಕೆ ಉಪಕ್ರಮ (ಎಫ್‌ಐಐ) ಆದ್ಯತಾ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಇರಾನ್‌ನೊಂದಿಗೆ ನಾವು ಯಾವುದೇ ಒಪ್ಪಂದಕ್ಕೆ ಬರಬೇಕಾದರೆ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವಂತೆ ಅವರಿಗೆ ಷರತ್ತನ್ನು ವಿಧಿಸುತ್ತೇವೆ. ಅಲ್ಲದೇ, ತೈಲ ಸಾಗಣೆಗೆ ಕಡಲ ಪ್ರವೇಶವನ್ನು ಪುನಃಸ್ಥಾಪಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದಿದ್ದಾರೆ.’ನಾವು ಈಗ ಮಾತುಕತೆ ನಡೆಸುತ್ತಿದ್ದೇವೆ. ನಾವು ಏನಾದರೂ ಮಾಡಲು ಸಾಧ್ಯವಾದರೆ ಅದು ಉತ್ತಮವಾಗಿರುತ್ತದೆ. ಆದರೆ ಅವರು ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಬೇಕು ಎಂದು ಟ್ರಂಪ್​ ಹೇಳಿದ್ದಾರೆ.ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಿನ ಯುದ್ಧಗಳು; ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ರುವಾಂಡಾ; ಕಾಂಬೋಡಿಯಾ ಮತ್ತು ಥಾಯ್ಲೆಂಡ್; ಈಜಿಪ್ಟ್ ಮತ್ತು ಇಥಿಯೋಪಿಯಾ; ಸೆರ್ಬಿಯಾ ಮತ್ತು ಕೊಸೊವೊ; ಇಸ್ರೇಲ್ ಮತ್ತು ಹಮಾಸ್ ಸೇರಿದಂತೆ ಎಂಟು ಯುದ್ಧಗಳನ್ನು ನಿಲ್ಲಿಸಲು ತಾನು ಸಹಾಯ ಮಾಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷರು ಪುನರುಚ್ಚರಿಸಿದ್ದಾರೆ.

‘ತಮ್ಮ ಪರಂಪರೆಯನ್ನು ಮಹಾನ್ ಶಾಂತಿಪ್ರಿಯರಾಗಿ ರೂಪಿಸಿಕೊಳ್ಳಲು ಇಷ್ಟಪಡುತ್ತೇನೆ. ಏಕೆಂದರೆ, ನಾನು ನನ್ನನ್ನು ನಿಜವಾಗಿಯೂ ಶಾಂತಿಪ್ರಿಯನೆಂದು ನಂಬುತ್ತೇನೆ. ಈಗ ಅದು ಹಾಗೆ ಕಾಣುತ್ತಿಲ್ಲ. ಆದರೆ, ನಾನು ಶಾಂತಿಪ್ರಿಯನೆಂದು ಭಾವಿಸುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ.

‘ನಾನು ಭಾರತ ಮತ್ತು ಪಾಕಿಸ್ತಾನದ ಯುದ್ದವನ್ನೂ ಸಹ ನಿಲ್ಲಿಸಿದೆ. ಅವರು ಒಂದು ವಾರದಿಂದ ಕಾದಾಡುತ್ತಿದ್ದರು. ಈ ಯುದ್ಧದಲ್ಲಿ ಒಂಬತ್ತು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ನೀವು ಹೋರಾಡುತ್ತಲೇ ಇದ್ದರೆ, ನಾನು ಪ್ರತಿಯೊಂದರ ಮೇಲೂ ಶೇಕಡಾ 250 ರಷ್ಟು ಸುಂಕವನ್ನು ವಿಧಿಸುತ್ತೇನೆ ಎಂದು ಅವರಿಗೆ ಎಚ್ಚರಿಸಿದೆ’ ಎಂದು ಟ್ರಂಪ್ ಮತ್ತೆ ಈ ವಿಷಯವನ್ನು ಹೇಳಿದ್ದಾರೆ.

ಟ್ರಂಪ್ ತಮ್ಮ ಹೇಳಿಕೆಗಳ ಸಮಯದಲ್ಲಿ ಹಾರ್ಮುಜ್ ಜಲಸಂಧಿಯನ್ನು “ಟ್ರಂಪ್ ಜಲಸಂಧಿ” ಎಂದು ತಮಾಷೆಯಾಗಿ ಉಲ್ಲೇಖಿಸಿದರು. ನಂತರ ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಂಡರು. ಇರಾನ್ ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆಯನ್ನು ರೂಪಿಸುವ ದೀರ್ಘಕಾಲದ ಶಕ್ತಿ ಎಂದು ಬಣ್ಣಿಸಿದರು. ಆದರೆ, ಅಮೆರಿಕದ ಮಿಲಿಟರಿ ಕಾರ್ಯಾಚರಣೆ ಎಪಿಕ್ ಫ್ಯೂರಿಯ ಅಡಿ ಅದರ ಸ್ಥಾನವು ದುರ್ಬಲಗೊಂಡಿದೆ ಎಂದು ತಿಳಿಸಿದ್ದಾರೆ.ಇರಾನ್ ಮೇಲಿನ ದಾಳಿಯನ್ನು ‘ಯುದ್ಧ’ ಎಂದು ಉಲ್ಲೇಖಿಸಲು ನಿರಾಕರಿಸಿದ ಅವರು, ಅದನ್ನು ಮಿಲಿಟರಿ ಕಾರ್ಯಾಚರಣೆ ಎಂದಷ್ಟೇ ಕರೆದಿದ್ದಾರೆ. ಇರಾನ್ ಜೊತೆಗಿನ ಯುದ್ಧದಲ್ಲಿ ತಮಗೆ ‘ಸಹಾಯ’ ಮಾಡದಿದ್ದಕ್ಕಾಗಿ ಅಮೆರಿಕದ ಅಧ್ಯಕ್ಷರು ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (ನ್ಯಾಟೋ)ವನ್ನು ಕಟುವಾಗಿ ಟೀಕಿಸಿದರು.
ನ್ಯಾಟೋ ಒಂದು ಕಾಗದದ ಹುಲಿ. ನ್ಯಾಟೋಗೆ ಸಹಾಯ ಮಾಡುತ್ತೇವೆ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಆದರೆ, ಅವರು ಎಂದಿಗೂ ನಮಗೆ ಸಹಾಯ ಮಾಡುವುದಿಲ್ಲ. ದೊಡ್ಡ ಅವಘಡ ಎಂದಾದರೂ ಸಂಭವಿಸಿದಲ್ಲಿ ಅವರು ಅಲ್ಲಿ ಇರುವುದಿಲ್ಲ ಎಂದು ನಾನು ನಿಮಗೆ ಖಾತರಿ ನೀಡುತ್ತೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!