ಉದಯವಾಹಿನಿ, ಶಿವಮೊಗ್ಗ: ಅಡಿಕೆ ತೋಟವೊಂದರಲ್ಲಿ ಖಾಸಗಿ ಕಾಲೇಜಿನ ಉಪನ್ಯಾಸಕರೊಬ್ಬರ ಮೃತದೇಹ ಬೆಂಕಿ ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಹನುಮಂತಾಪುರ ಗ್ರಾಮದಲ್ಲಿ ನಡೆದಿದೆ.ಸುರೇಶ್ (58) ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟ ಉಪನ್ಯಾಸಕ ಎಂದು ಗುರುತಿಸಲಾಗಿದೆ. ಇವರು ಶಿವಮೊಗ್ಗದ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಅವರ ತೋಟದಲ್ಲೇ ಶವ ಬೆಂಕಿ ಹೊತ್ತಿ ಉರಿಯುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಕ್ಕಪಕ್ಕದ ತೋಟದವರು ಬೆಂಕಿಯಲ್ಲಿ ದೇಹ ಉರಿಯುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಹೊಳೆಹೊನ್ನೂರು ಠಾಣೆ ಪೊಲೀಸರು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಮೃತದೇಹ ಭಾಗಶಃ ಸುಟ್ಟು ಕರಕಲಾಗಿತ್ತು. ಸ್ಥಳಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಸುತ್ತ ಸಂಪೂರ್ಣ ನಿಗೂಢತೆ ಆವರಿಸಿದ್ದು, ಆತ್ಮಹತ್ಯೆಯೋ? ಕೊಲೆಯೋ? ಎಂಬುದು ಪೊಲೀಸರ ತನಿಖೆಯ ನಂತರ ಸ್ಪಷ್ಟವಾಗಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!