ಉದಯವಾಹಿನಿ, ಮುಂಬೈ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಗಳು ತೀವ್ರಗೊಳ್ಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿದ್ದು ಹೂಡಿಕೆದಾರರ ಸಂಪತ್ತು ಇಂದು ಒಂದೇ ದಿನದಲ್ಲಿ 10 ಲಕ್ಷ ಕೋಟಿ ರೂ. ಕರಗಿದೆ. ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್(Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ(NSE) ಸೂಚಂಕ್ಯ ನಿಫ್ಟಿ , ಬ್ಯಾಂಕ್ ನಿಫ್ಟಿ ಅಂಕಗಳು ಭಾರೀ ಇಳಿಕೆಯಾಗಿದ್ದರಿಂದ ಒಂದೇ ದಿನ ಹೂಡಿಕೆದಾರರು ಸುಮಾರು 10 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ. ಯಾವುದು ಎಷ್ಟು ಇಳಿಕೆ?
ಸೆನ್ಸೆಕ್ಸ್ 1,635(-2.22%) ಅಂಕ ಕುಸಿದು 82.497.1ರಲ್ಲಿ ಕೊನೆಯಾದರೆ ನಿಫ್ಟಿ 488 (-2.1%) ಅಂಕ ಇಳಿಕೆಯಾಗಿ 22,331.40 ರಲ್ಲಿ ಕೊನೆಯಾಯಿತು. ಬ್ಯಾಂಕ್ ನಿಫ್ಟಿ 1,999.25(-3.82%) ಅಂಕ ಕುಸಿದು 50,275.35 ರಲ್ಲಿ ವ್ಯವಹಾರ ಮುಗಿಸಿದೆ. ಅಮೆರಿಕ ಭೂದಾಳಿ ನಡೆಸಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಂದು ಮೊದಲೇ ಕುಸಿತವಾಗಲಿದೆ ಎನ್ನುವ ನಿರೀಕ್ಷೆ ಇತ್ತು. ಪ್ರತಿ ಮಂಗಳವಾರ ನಿಫ್ಟಿ ಕಾಂಟ್ರಾಕ್ಟ್ ಎಕ್ಸ್‌ಪೈರಿಯಾಗುತ್ತದೆ. ಬ್ಯಾಂಕ್ ನಿಫ್ಟಿಯ ವಾರ ಮತ್ತು ತಿಂಗಳ ಫ್ಯೂಚರ್ ಕಾಂಟ್ರಾಕ್ಟ್ ಮಂಗಳವಾರವೇ ಕೊನೆಯಾಗುತ್ತದೆ. ನಾಳೆ ಮಂಗಳವಾರ(ಮಾ.31) ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಬಿಎಸ್‌ಇ ಮತ್ತು ಎನ್‌ಎಸ್‌ಇಗೆ ರಜೆ ಇದೆ. ಮಂಗಳವಾರ ರಜೆ ಇರುವ ಕಾರಣ ಇಂದೇ ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿ ಫ್ಯೂಚರ್ ಕಾಂಟ್ರಾಕ್ಟ್ ಕೊನೆಗೊಗುವುದರಿಂದ ಹೂಡಿಕೆದಾರರು ಇಂದು ಹೂಡಿಕೆಯನ್ನು ಮಾರಾಟ ಮಾಡಿ ಭಾರೀ ಪ್ರಮಾಣದಲ್ಲಿ ಹಣವನ್ನು ಹಿಂದಕ್ಕೆ ಪಡೆದಿದ್ದಾರೆ.
