ಉದಯವಾಹಿನಿ, ಬೆಂಗಳೂರು: ಒಂದೆಡೆ ಜೈಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಶತಪ್ರಯತ್ನಗಳು ನಡೆಯುತ್ತಿದ್ದರೆ ಮತ್ತೊಂದು ಕಡೆ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ನಿಲ್ಲದೇ ಎಗ್ಗಿಲ್ಲದೇ ಸಾಗುತ್ತಿವೆ. ಜೈಲಾಧಿಕಾರಿಗಳ ಕಟ್ಟುನಿಟ್ಟಿನ ಕ್ರಮಕ್ಕೆ ಡೋಂಟ್‌ ಕೇರ್‌ ಎನ್ನುತ್ತಾ ಡ್ರಗ್ಸ್‌, ಗಾಂಜಾ, ಮೊಬೈಲ್‌ ಮೊದಲಾದ ವಸ್ತುಗಳನ್ನು ಸರಬರಾಜು ಪ್ರಯತ್ನಗಳು ಮುಂದುವರಿಯುತ್ತಲೇ ಇವೆ. ಈ ಮಧ್ಯೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾ ಕೈದಿಯಾಗಿರುವ ಪತಿ ಫರ್ಹಾನ್ ಖಾನ್‌ಗೆ ನೀಡಲು ಮೂರು 5ಜಿ ಸಿಮ್‌, ಬೀಡಿ ಹಾಗೂ ಗಾಂಜಾ ವಸ್ತುಗಳೊಂದಿಗೆ ಬಂದಿದ್ದ ಮಹಿಳೆ ಸಿಕ್ಕಿಬಿದ್ದು, ಅದೇ ಜೈಲಿಗೆ ಸೇರಿದ್ದಾಳೆ. ರಿತಿಕಾ ರೇ (27) ಬಂಧಿತ ಮಹಿಳೆ.
ಅಸ್ಸಾಂ ಮೂಲದ ರಿತಿಕಾ, ಹೆಣ್ಣೂರಿನ ಫರ್ಹಾನ್‌ ಖಾನ್‌ನನ್ನ 2ನೇ ಮದುವೆಯಾಗಿದ್ದರು ಕೆಲ ತಿಂಗಳ ಹಿಂದೆ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿ ಫರ್ಹಾನ್‌ ಖಾನ್‌ ಜೈಲು ಸೇರಿದ್ದ. ಮಾ.26 ರಂದು ಗಂಡ ಫರ್ಹಾನ್‌ನನ್ನ ನೋಡಲು ಸಂದರ್ಶನದ ಪಾಸು ಪಡೆದು ರಿತಿಕಾ ಬಂದಿದ್ದಳು. ಜೈಲಿನ ಪ್ರವೇಶ ದ್ವಾರದಲ್ಲಿ ರಿತಿಕಾ ನಡವಳಿಕೆ ಅನುಮಾನಾಸ್ಪದವಾಗಿತ್ತು. ಹೀಗಾಗಿ, ಮಹಿಳಾ ಸಿಬ್ಬಂದಿ ರಿತಿಕಾಳನ್ನ ವಶಕ್ಕೆ ಪಡೆದು ತಪಾಸಣೆ ನಡೆಸಿದ್ದರು. ಈ ವೇಳೆ ರಿತಿಕಾ ತನ್ನ ದೇಹದ ಖಾಸಗಿ ಭಾಗದಲ್ಲಿ ಮೂರು ಸಿಮ್‌, 27 ಗ್ರಾಂ ಮೆಥಾಂಫೆಟಮೈನ್‌ ಡ್ರಗ್ಸ್‌ ಪುಡಿ, ಬೀಡಿ ಹಾಗೂ ತಂಬಾಕು ಉತ್ಪನ್ನವನ್ನ ಕವರ್‌ನಲ್ಲಿ ಬಚ್ಚಿಟ್ಟುಕೊಂಡಿರುವುದು ಕಂಡು ಬಂದಿತ್ತು. ಹೀಗಾಗಿ, ತಕ್ಷಣ ಜೈಲು ಸಿಬ್ಬಂದಿ ವಶಕ್ಕೆ ರಿತಿಕಾಳನ್ನ ಒಪ್ಪಿಸಿದ್ದರು.
ಜೈಲು ಅಧಿಕಾರಿಗಳು ನೀಡಿದ ದೂರಿನನ್ವಯ ಎನ್‌ಡಿಪಿಎಸ್‌ ಹಾಗೂ ಜೈಲು ನಿಯಮಗಳ ಉಲ್ಲಂಘನೆ ಆರೋಪದನ್ವಯ ಪ್ರಕರಣ ದಾಖಲಿಸಿ ರಿತಿಕಾಳನ್ನ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!