ಉದಯವಾಹಿನಿ, ಚಿಕ್ಕಬಳ್ಳಾಪುರ: ಟೆಕ್ಕಿ ದಂಪತಿ ಹೊರಟಿದ್ದ ಕಾರು ಲಾರಿಗೆ ಡಿಕ್ಕಿಯಾಗಿ ನವವಿವಾಹಿತೆ ಸಾವನ್ನಪ್ಪಿದ್ದು, ಪತಿ ಸ್ಥಿತಿ ಗಂಭೀರವಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಶೆಟ್ಟಿಗೆರೆ ಕ್ರಾಸ್ ಬಳಿ ಸಂಭವಿಸಿದೆ.ರಕ್ಷಿತಾ ರೆಡ್ಡಿ (23) ಹಾಗೂ ಪವನ್ ರೆಡ್ಡಿ (30) ಮೃತರು. ಪತಿ ರಾಜಶೇಖರ್ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಿತಾ ಹಾಗೂ ರಾಜಶೇಖರ್ ದಂಪತಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜನಿಯರ್ ಆಗಿದ್ದರು ಎಂದು ತಿಳಿದುಬಂದಿದೆ.
ಟೆಕ್ಕಿ ದಂಪತಿ ಕಳೆದ ನವೆಂಬರ್‌ನಲ್ಲಷ್ಟೇ ವಿವಾಹವಾಗಿದ್ದರು. ಇಬ್ಬರು ತಮ್ಮ ಸಂಬಂಧಿ ಪವನ್ ರೆಡ್ಡಿ ಜೊತೆ ಕಾರಿನಲ್ಲಿ ಅನಂತಪುರದ ಸ್ವಗ್ರಾಮ ಅವಳಗಿಗೆ ತೆರಳುತ್ತಿದ್ದರು. ಈ ವೇಳೆ ಮುಂದೆ ಸಾಗುತ್ತಿದ್ದ ಕಂಟೇನರ್ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಪತ್ನಿ ಹಾಗೂ ಪವನ್ ಸಾವನ್ನಪ್ಪಿದ್ದಾರೆ.
