
ಉದಯವಾಹಿನಿ, ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನ್ಯಾಯಾಧೀಶರನ್ನು ಒತ್ತೆಯಾಳಾಗಿರಿಸಿಕೊಂಡು ಬೃಹತ್ ಪ್ರತಿಭಟನೆ ನಡೆಸಿ ಗಲಭೆ ಸೃಷ್ಟಿಸಿದ್ದ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೊಫಕ್ಕೆರುಲ್ ಇಸ್ಲಾಂ ಎಂದು ಗುರುತಿಸಲಾಗಿದೆ. ಈತನ ಜೊತೆ ಅವನ ಸಹಾಯಕ ಎಕ್ರಮುಲ್ ಬಗ್ನಿಯನ್ನೂ ಘಟನೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಇಬ್ಬರೂ ಬಾಗ್ಡೋಗ್ರ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣಿಸಲು ಪ್ಲ್ಯಾನ್ ಮಾಡಿದ್ದರು. ವಿಮಾನ ನಿಲ್ದಾಣದಲ್ಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ. ಜಯರಾಮನ್, ಜನರನ್ನು ಪ್ರಚೋದಿಸಿದ್ದಕ್ಕಾಗಿ ನಾವು ಮೊಫಕ್ಕೆರುಲ್ ಇಸ್ಲಾಂನನ್ನು ಬಂಧಿಸಿದ್ದೇವೆ. ಅಂತಹ ಯಾವುದೇ ರೀತಿಯ ಅಶಾಂತಿ ಉಂಟು ಮಾಡುವ ಚಟುವಟಿಕೆಗಳಿಗೆ ನಾವು ಅವಕಾಶ ನೀಡುವುದಿಲ್ಲ. ಇದು ಪೂರ್ವ ಯೋಜಿತವಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. ಈ ಘಟನೆಯ ನಂತರ, ನಾವು ನ್ಯಾಯಾಂಗ ಅಧಿಕಾರಿಗಳಿಗೆ CAPF ರಕ್ಷಣೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಮಾಲ್ಡಾದಲ್ಲಿ ಪ್ರತಿಭಟನಾಕಾರರ ಗುಂಪನ್ನು ಉದ್ದೇಶಿಸಿ ಮೊಫಕ್ಕೆರುಲ್ ಪ್ರಚೋದನಕಾರಿ ಭಾಷಣ ಮಾಡಿದ್ದಾನೆ ಎನ್ನಲಾದ ವೀಡಿಯೊ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಕನಿಷ್ಠ 35 ಜನರನ್ನು ಬಂಧಿಸಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಚುನಾವಣಾ ಆಯೋಗ ಈ ಪ್ರಕರಣದ ತನಿಖೆಯನ್ನು ಭಯೋತ್ಪಾದನಾ ವಿರೋಧಿ ಸಂಸ್ಥೆ NIA ಗೆ ಹಸ್ತಾಂತರಿಸಿದೆ.
ಮಾಲ್ಡಾದಲ್ಲಿ ನಡೆದಿದ್ದೇನು?
ಮಾಲ್ಡಾ ಜಿಲ್ಲೆಯಲ್ಲಿ ಏಪ್ರಿಲ್ 1 ರಂದು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿದ್ದ (SIR) ನ್ಯಾಯಾಂಗ ಅಧಿಕಾರಿಗಳ ಮೇಲೆ ದೊಡ್ಡ ಮಟ್ಟದ ದಾಳಿ ನಡೆದಿತ್ತು. ಮತದಾರರ ಪಟ್ಟಿಯಿಂದ ಕೆಲವು ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಕಾರಣಕ್ಕೆ ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಮಾಲ್ಡಾದ ಇಂಗ್ಲಿಷ್ ಬಜಾರ್‌ನಲ್ಲಿರುವ ಕಚೇರಿಯನ್ನು ಮುತ್ತಿಗೆ ಹಾಕಿದ್ದರು. ಮೂವರು ಮಹಿಳಾ ಜಡ್ಜ್ ಸೇರಿ ಒಟ್ಟು ಏಳು ನ್ಯಾಯಾಧೀಶರನ್ನು ಪ್ರತಿಭಟನಾಕಾರರು ಸುಮಾರು 10 ಗಂಟೆಗಳ ಕಾಲ ಕಚೇರಿಯೊಳಗೆ ಕೂಡಿಹಾಕಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ಸಮಯದಲ್ಲಿ ಅಧಿಕಾರಿಗಳಿಗೆ ಆಹಾರ, ನೀರು ಅಥವಾ ವೈದ್ಯಕೀಯ ನೆರವು ಸಿಗದಂತೆ ತಡೆಯಲಾಗಿತ್ತು. ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು ಎಂದು ವರದಿಯಾಗಿದೆ. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಲ್ಲದೆ, ಕಚೇರಿಯ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದರು. ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲರಾಗಿದ್ದರು.
