ಉದಯವಾಹಿನಿ, ದುಬೈ (ಯುಎಇ): ಕದನ ವಿರಾಮ ಮಾತುಕತೆಗಳು ಮುಂದುವರಿಯುತ್ತಿವೆ ಎಂಬ ಆಶಾವಾದದ ನಡುವೆ ಇರಾನ್ ಗಲ್ಫ್ ರಾಷ್ಟ್ರಗಳಾದ ಕತಾರ್ ಮತ್ತು ಕುವೈತ್ ಮೇಲೆ ದಾಳಿ ಮಾಡಿದೆ. ಇತ್ತ ಇಸ್ರೇಲ್ ಕೂಡ ಇರಾನ್ ಮೇಲೆ ದಾಳಿ ಮುಂದುವರಿಸಿದೆ. ಗಮನಾರ್ಹ ಸಂಗತಿಯೆಂದರೆ, ಅಮೆರಿಕ ಜೊತೆಗೆ ಶಾಂತಿ ಮಾತುಕತೆ ನಡೆಯುತ್ತಿವೆ ಎಂದು ಇರಾನ್ ಇದೇ ಮೊದಲ ಸಲ ಒಪ್ಪಿಕೊಂಡಿದೆ.
ಕತಾರ್ ಕರಾವಳಿಯಲ್ಲಿ ಟ್ಯಾಂಕರ್ವೊಂದನ್ನು ಹೊಡೆದು ಹಾಕಿದೆ ಎಂದು ಬ್ರಿಟಿಷ್ ಮಿಲಿಟರಿಯ ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ಸೆಂಟರ್ ತಿಳಿಸಿದೆ. ದಾಳಿಯಲ್ಲಿ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
ಇತ್ತ, ಕುವೈತ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಧನ ಟ್ಯಾಂಕ್‌ಗೆ ಡ್ರೋನ್ ಡಿಕ್ಕಿ ಹೊಡೆದಿದೆ. ಇದರಿಂದ ಭಾರೀ ಬೆಂಕಿ ಹೊತ್ತಿಕೊಂಡಿದೆ. ಸೌದಿ ಅರೇಬಿಯಾದ ಮೇಲೆ ಹಾರಿಬಿಟ್ಟ ಎರಡು ಡ್ರೋನ್‌ಗಳನ್ನು ಹೊಡೆದು ಹಾಕಲಾಗಿದೆ ಎಂದು ವರದಿಯಾಗಿದೆ.
ಇಸ್ರೇಲ್ ಮೇಲೆ ಹೌತಿಗಳ ದಾಳಿ: ಇಸ್ರೇಲ್‌ನಲ್ಲಿ ವಾಯುದಾಳಿ ಸೈರನ್‌ಗಳು ಮೊಳಗಿವೆ. ಯೆಮೆನ್ನ ಹೌತಿಗಳು ಮತ್ತು ಇರಾನ್ನಿಂದ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಆದರೆ, ಯಾವುದೇ ಹಾನಿ ಅಥವಾ ಸಾವು – ನೋವುಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಗಾಯಾಳು ಯೋಧರು ಮತ್ತು ಜನರಿಗೆ ನೋವು ನಿವಾರಕವಾಗಿ ಫೆಂಟನಿಲ್ ಎಂಬ ಔಷಧ ನೀಡಲಾಗುತ್ತಿದೆ. ಇದು ಅಪಾಯಕಾರಿ ಚಿಕಿತ್ಸೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇರಾನ್ ಯುದ್ಧಸಾಮಗ್ರಿಗಳಲ್ಲೂ ಫೆಂಟನಿಲ್ ಅನ್ನು ಪ್ರಯೋಗಿಸುತ್ತಿದೆ ಎಂದು ಇಸ್ರೇಲ್ ಮತ್ತು ಅಮೆರಿಕ ಎರಡೂ ಆರೋಪಿಸಿವೆ.
ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಇನ್ನೊಂದೆಡೆ, ಲೆಬನಾನ್ ಬೈರುತ್ ನಗರದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಕನಿಷ್ಠ ಐದು ಮಂದಿ ಸಾವಿಗೀಡಾಗಿದ್ದಾರೆ. ಅಲ್ಲಿನ ಆರೋಗ್ಯ ಸಚಿವಾಲಯವು ತಿಳಿಸಿದಂತೆ 21 ಜನರು ಗಾಯಗೊಂಡಿದ್ದಾರೆ. ವರೆಗೂ ಲೆಬನಾನ್‌ನಲ್ಲಿ 1,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 1 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಹತ್ತು ಇಸ್ರೇಲಿ ಸೈನಿಕರೂ ಸಹ ಸಾವನ್ನಪ್ಪಿದ್ದಾರೆ.
ಇರಾನ್‌ನಲ್ಲಿ, 1,900 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ 19 ಮಂದಿ ಸಾವಿಗೀಡಾಗಿದ್ದಾರೆ. ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ, 13 ಮಂದಿ ಅಮೆರಿಕದ ಯೋಧರು ಪ್ರಾಣ ಕಳೆದುಕೊಂಡು, 348 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಆರು ಮಂದಿ ಗಂಭೀರವಾಗಿದ್ದಾರೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ.
