ಉದಯವಾಹಿನಿ, ಮಂದ್ಸೌರ್ (ಮಧ್ಯಪ್ರದೇಶ): ಲಕ್ಷದಲ್ಲಿ ಒಂದು ಎನ್ನುವಂತಹ ಅಪರೂಪದ ಅಪಾಯಕಾರಿ ವಂಶಾವಳಿ ಕಾಯಿಲೆಗೆ ಮಗುವೊಂದು
ತುತ್ತಾಗಿದೆ. ಈ ಸಮಸ್ಯೆಗೆ ಅಮೆರಿಕದಲ್ಲಿ ಮಾತ್ರ ಚಿಕಿತ್ಸೆ ಲಭ್ಯವಿದ್ದು, ಈ ಒಂದು ಚುಚ್ಚುಮದ್ದಿಗೆ ಸುಮಾರು 9.4 ಕೋಟಿ ರೂಪಾಯಿ ವ್ಯಯವಾಗುತ್ತದೆ. ಈ ಆರ್ಥಿಕ ವೆಚ್ಚವನ್ನು ಭರಿಸಲಾಗದ ಕುಟುಂಬವೀಗ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಡಾ ಮೋಹನ್ ಯಾದವ್ ಅವರಿಗೆ ಸಹಾಯಕ್ಕಾಗಿ ಮೊರೆಯಿಟ್ಟಿದೆ.
ಮಂದ್ಸೌರ್ ಜಿಲ್ಲೆಯ ಗರೋತ್‌ನಲ್ಲಿ ವಾಸಿಸುವ ಅನಿಲ್ ಸೋನಿ ಅವರ ಮೊಮ್ಮಗಳು ಸೃಷ್ಟಿಗೆ ಈ ಆರೋಗ್ಯ ಸಮಸ್ಯೆ ಎದುರಾಗಿದೆ. ಮಗುವು ಬೆನ್ನುಹುರಿಯ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಎಂಬ ಅಪಾಯಕಾರಿ ಕಾಯಿಲೆಯಿಂದ ಬಳಲುತ್ತಿದೆ.
ಅನಿಲ್ ಅವರ ಮಗ ಗೌರವ್ ಅವರ ಪತ್ನಿ ಒಂದೂವರೆ ತಿಂಗಳ ಹಿಂದೆ ನವಜಾತ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಕೆಲವು ದಿನಗಳ ನಂತರ ಮಗುವಿನಲ್ಲಿ ಅಸಾಮಾನ್ಯ ಲಕ್ಷಣಗಳು ಕಾಣಿಸಿಕೊಂಡವು. ತಕ್ಷಣಕ್ಕೆ ಕುಟುಂಬ ಮಗುವನ್ನು ಇಂದೋರ್ ಮತ್ತು ಕೋಟಾದ ಉನ್ನತ ವೈದ್ಯರ ಬಳಿ ಕರೆದೊಯ್ಯಿತು. ಮಗು ಉಸಿರಾಟ, ಹಾಲು ಕುಡಿಯುವುದು ಮತ್ತು ತಲೆ ಎತ್ತುವಲ್ಲಿ ತೀವ್ರ ತೊಂದರೆಗಳನ್ನು ಎದುರಿಸುತ್ತಿದೆ. ಹಲವಾರು ಪರೀಕ್ಷೆಗಳ ನಂತರ, ವೈದ್ಯರು ಆಕೆಯ ದೇಹದಲ್ಲಿ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಎಂಬ ಅಪರೂಪದ ಮತ್ತು ಅಪಾಯಕಾರಿ ಜೆನೆಟಿಕ್ ವೈರಸ್ ಇರುವಿಕೆಯನ್ನು ದೃಢಪಡಿಸಿದ್ದಾರೆ.
ಭಾರತದಲ್ಲಿಲ್ಲ ಚುಚ್ಚುಮದ್ದು: ಈ ಅಪರೂಪದ ಕಾಯಿಲೆಗೆ ಭಾರತದಲ್ಲಿ ಚಿಕಿತ್ಸೆ ಇಲ್ಲ. ಆದರೆ, ಅಮೆರಿಕದಲ್ಲಿ ಇದರ ಚುಚ್ಚುಮದ್ದು ಲಭ್ಯವಿದ್ದು, ಅದಕ್ಕೆ 9.4 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ವಿವಿಧ ಪರೀಕ್ಷೆಗಳನ್ನು ನಡೆಸಿದ ಜೈಪುರ ಮೂಲದ ವೈದ್ಯ ಪ್ರಿಯಾಂಶು ಮಾಥುರ್ ಪೋಷಕರಿಗೆ ಮಗುವಿಗೆ ಎರಡು ವರ್ಷ ತುಂಬುವ ಮೊದಲು ಲಸಿಕೆ ಹಾಕಿಸುವುದು ಅತ್ಯಗತ್ಯ ಎಂದು ಸಲಹೆ ನೀಡಿದ್ದಾರೆ. ಸೈಕಲ್ ಮತ್ತು ಮೋಟಾರ್ ಸೈಕಲ್ ಪಂಕ್ಚರ್ ರಿಪೇರಿ ಮಾಡುವ ಅನಿಲ್ ಸೋನಿ ಈ ಹಣ ಭರಿಸಲಾಗದೆ ಇದೀಗ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಹಲವು ಪ್ರಾರ್ಥನೆಗಳ ಬಳಿಕ ಜನಿಸಿದ ಮಗು: ಹಲವು ವರ್ಷಗಳ ಬಳಿಕ ದೇವರ ಕೃಪೆಯಿಂದ ಮನೆಯಲ್ಲಿ ಹೆಣ್ಣು ಮಗು ಜನಿಸಿದೆ. ಆಕೆ ಕುಟುಂಬಕ್ಕೆ ಸಂತೋಷ ತಂದಿದ್ದಾಳೆ. ಆದರೆ, ಇದೀಗ ಮಗುವಿನಲ್ಲಿ ಈ ಅಪಾಯಕಾರಿ ಕಾಯಿಲೆ ಪತ್ತೆ ಆಗಿರುವುದು ಕುಟುಂಬಸ್ಥರಿಗೆ ಆಘಾತ ನೀಡಿದೆ. ನಮ್ಮ ಜೀವನ ನಡೆಸುವುದೇ ಸವಾಲಾಗಿರುವ ಈ ಸಂದರ್ಭದಲ್ಲಿ ಮಗುವಿಗೆ ಅಮೆರಿಕದಿಂದ ಚುಚ್ಚುಮದ್ದು ತರಿಸಿ ನೀಡುವುದು ಸವಾಲಾಗಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಧ್ಯ ಪ್ರದೇಶ ಸಿಎಂ ಡಾ ಮೋಹನ್ ಯಾದವ್ಗೆ ಆರ್ಥಿಕ ಸಹಾಯಕ್ಕಾಗಿ ಕುಟುಂಬ ಅಂಗಲಾಚಿದೆ.
