ಉದಯವಾಹಿನಿ, ಸಂಬಲ್ಪುರ್ (ಒಡಿಶಾ): ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಉಂಟಾಗಿರುವ ಎಲ್ಪಿಜಿ ಸಮಸ್ಯೆ ಇದೀಗ ನಿರಾಶ್ರಿತರ, ನಗರ ಬಡವರ ಊಟಕ್ಕೂ ಸಮಸ್ಯೆಯಾಗಿ ಪರಿಣಮಿಸಿದೆ. ದಿನನಿತ್ಯದ ಬದುಕಿನ ಹೋರಾಟ ನಡೆಸುವ ಅನೇಕ ಬಡವರಿಗೆ ಸಂಬಲ್ಪರದ ಸ್ವಯಂ ಸೇವಾ ಸಂಸ್ಥೆ ಖಿದ್ಮತ್ ಪ್ರತಿನಿತ್ಯ ಅನ್ನದಾಸೋಹ ನಡೆಸುತ್ತಿದೆ. ಪ್ರತಿದಿನ 40 ರಿಂದ 50 ಮಂದಿ ಬಡವರು ಇಲ್ಲಿ ಆಹಾರ ಸೇವಿಸುತ್ತಿದ್ದಾರೆ. ಆದರೆ, ಇದೀಗ ಮಧ್ಯಪ್ರಾಚ್ಯದ ಬಿಕ್ಕಟ್ಟು ಈ ಆಹಾರ ತಯಾರಿಕೆ ಮೇಲೂ ಕಾರ್ಮೋಡ ಆವರಿಸುವಂತೆ ಮಾಡಿದೆ.
ಭುವನೇಶ್ವರ ದೇವಸ್ಥಾನ ಮತ್ತು ಪೀರ್ ಬಾಬಾ ಚೌಕ್ ಬಳಿ ಇರುವ ಈ ರೋಟಿ ಬ್ಯಾಂಕ್, ಸಂತ್ರಸ್ತರಿಗೆ ನಿತ್ಯ ರೊಟ್ಟಿ, ಪಲ್ಯ, ಅನ್ನ ಮತ್ತು ದಾಲ್ ಊಟವನ್ನು ಒದಗಿಸುತ್ತಿದೆ. ಕೆಲವು ದಿನ ಸಾಂದರ್ಭಿಕವಾಗಿ ಬಿರಿಯಾನಿ ಮತ್ತು ಚಿಕನ್ ಅನ್ನು ನೀಡುತ್ತದೆ. ಇದೀಗ ಈ ಎಲ್ಪಿಜಿ ಬಿಕ್ಕಟ್ಟಿನಿಂದ ಸಂಸ್ಥೆ ಊಟದಲ್ಲಿ ರೊಟ್ಟಿಯನ್ನು ನಿಲ್ಲಿಸಿದೆ. ರೊಟ್ಟಿಯನ್ನು ಬೇಯಿಸಲು ಹೆಚ್ಚಿನ ಎಲ್ಪಿಜಿ ಬೇಕಾಗಿರುವ ಹಿನ್ನೆಲೆ ಇದನ್ನು ಕೈಬಿಟ್ಟು ಕೇವಲ ಅನ್ನ ದಾಲ್, ಉಪ್ಪಿನಕಾಯಿಯನ್ನು ಮಾತ್ರ ಒದಗಿಸುತ್ತಿದೆ.
ಈ ಕುರಿತು ಮಾತನಾಡಿರುವ ಸಂಘಟನೆ ಸದಸ್ಯ ಮೊಹಮ್ಮದ್ ಜಾವೇದ್, ಅನಿರೀಕ್ಷಿತ ಸಮಸ್ಯೆ ಮತ್ತು ಬಿಕಟ್ಟಿನ ಪರಿಸ್ಥಿತಿಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿ ತಿಂಗಳು ಇಲ್ಲಿ ಅಡುಗೆ ತಯಾರಿಕೆಗೆ 3-4 ಎಲ್ಪಿಜಿ ಸಿಲಿಂಡರ್ ಬಳಕೆ ಮಾಡುತ್ತಿದ್ದೇವೆ. ಆದರೆ, ಇದೀಗ ವಾಣಿಜ್ಯ ಎಲ್ಪಿಜಿ ಪೂರೈಕೆ ಸಂಪೂರ್ಣವಾಗಿ ನಿಂತಿದೆ. ಯುದ್ದ ಆರಂಭವಾದ 15 ದಿನದವರೆಗೆ ಹೇಗೋ ಸಂಸ್ಥೆ ನಿರ್ವಹಿಸಿದ್ದೇವೆ. ಆದರೆ, ಇದೀಗ ಗ್ಯಾಸ್ ಎಜೆನ್ಸಿಗಳು ಸಿಲಿಂಡರ್ ನೀಡಲು ನಿರಾಕರಿಸಿವೆ. ಈ ಮೊದಲು 900 ರೂ.ಗೆ ಸಿಲಿಂಡರ್ ಪಡೆಯುತ್ತಿದ್ದೆವು. ಆದರೆ ಈಗ ಅದು 2,500 – 3,500 ರೂ.ಗೆ ಏರಿದೆ. ಈ ವೆಚ್ಚದಲ್ಲಿ ನಿರ್ವಹಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ಇದರ ಪರಿಣಾಮ ಪ್ರತಿನಿತ್ಯ 40-50 ಜನರ ಆಹಾರ ಪಡೆಯುತ್ತಿದ್ದವರ ಸಂಖ್ಯೆ ಇದೀಗ ಇಳಿಕೆಯಾಗಿದೆ. ರೋಟಿ ನಿಲ್ಲಿಸಿದ ಹಿನ್ನೆಲೆ ಈ ಸಂಖ್ಯೆ 30 ರಿಂದ 35ಕ್ಕೆ ಇಳಿದಿದೆ. ಇದೇ ರೀತಿ ಬಿಕ್ಕಟ್ಟು ಮುಂದುವರೆದರೆ, ಸೀಮಿತ ಸೇವೆಯನ್ನು ಸಹ ಸ್ಥಗಿತಗೊಳಿಸಬೇಕಾಗಬಹುದು ಎಂದರು.
