
ಉದಯವಾಹಿನಿ, ಇಸ್ರೇಲ್ – ಅಮೆರಿಕ ಮತ್ತು ಇರಾನ್ ಮಧ್ಯದ ಯುದ್ಧ 36ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಇದೇ ಮೊದಲ ಬಾರಿಗೆ ಅಮೆರಿಕದ ಎರಡು ಯುದ್ಧ ವಿಮಾನಗಳನ್ನು ಇರಾನ್ ಹೊಡೆದುರುಳಿಸಿದೆ. ಘಟನೆಯಲ್ಲಿ ಓರ್ವ ಪೈಲಟ್ನನ್ನು ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ ಇನ್ನೋರ್ವ ಅಮೆರಿಕನ್ ಸಿಬ್ಬಂದಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಒಪ್ಪಂದ ಒಪ್ಪದಿದ್ದರೆ ಇರಾನ್ ಅನ್ನು ಶೀಘ್ರದಲ್ಲೇ ನಾಶ ಮಾಡಲಿದ್ದೇವೆ ಎಂದು ಅಮೆರಿಕ್ ಅಧ್ಯಕ್ಷ ಟ್ರಂಪ್ ಹೇಳಿಕೆಯ ಬೆನ್ನಲ್ಲೇ ಇರಾನ್ ಪ್ರತಿದಾಳಿ ಮೂಲಕ ಕಠಿಣ ಸಂದೇಶ ರವಾನಿಸಿದೆ.
ಇರಾನ್ನಲ್ಲಿ ಒಂದು ಫೈಟರ್ ಜೆಟ್ ಹೊಡೆದುರುಳಿಸಿ, ಅದರಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಇನ್ನು ಎರಡನೇ ವಿಮಾನದ ಸಿಬ್ಬಂದಿಯು ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಈ ಕುರಿತು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಶ್ವೇತಭವನ ಅಥವಾ ಪೆಂಟಗನ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸಂದರ್ಶನವೊಂದರಲ್ಲಿ ಟ್ರಂಪ್, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾತನಾಡಲು ನಿರಾಕರಿಸಿ, ಇದು ಯುದ್ಧ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇರಾನ್ ರಕ್ಷಣಾ ಪಡೆಗಳ ದಾಳಿಗೆ ಪರ್ಷಿಯನ್ ಕೊಲ್ಲಿಯಲ್ಲಿ ಯುಎಸ್ ಎ-10 ಪೈಟರ್ ಜೆಟ್ ಪತನಗೊಂಡಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮವು ಮಾಹಿತಿ ನೀಡಿದೆ. ಜೊತೆಗೆ ನಾಪತ್ತೆಯಾದ ಪೈಲಟ್ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗೆ ಆಗಮಿಸಿದ್ದ ಎರಡು ಯುಎಸ್ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳನ್ನು ಸಹ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಇರಾನ್ ಹೇಳಿಕೊಂಡಿದೆ.
ಒಂದು ಸೀಟಿರುವ ಯುಎಸ್ ಎ -10 ವಿಮಾನವನ್ನು ಹೊಡೆದುರುಳಿಸಿದ್ದೇವೆ. ಇದಕ್ಕೂ ಮೊದಲು ಯುಎಸ್ ಎಫ್ -15 ಇ ಸ್ಟ್ರೈಕ್ ಈಗಲ್ ಅನ್ನು ಪತನಗೊಳಿಸಿದ್ದೇವೆ ಎಂದು ಇರಾನ್ ತಿಳಿಸಿತ್ತು. 289 ಕೋಟಿ ಮೌಲ್ಯದ ಈ ವಿಮಾನವು ಪೈಲಟ್ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯ ಅಧಿಕಾರಿಯನ್ನು ಹೊತ್ತೊಯ್ಯುವ ವಾಯುಪಡೆಯ ಫೈಟರ್ ಜೆಟ್‌ನ ರೂಪಾಂತರವಾಗಿದೆ. ಎರಡರಲ್ಲಿ ಯಾರನ್ನು ರಕ್ಷಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಸುಮಾರು ರೂ 174 ಕೋಟಿ ಮೌಲ್ಯದ ಎ -10 ವಾರ್ಥಾಗ್ ಯುದ್ಧ ವಿಮಾನವು ಕುವೈತ್ ಮೇಲೆ ಡಿಕ್ಕಿ ಹೊಡೆದು ಪತನಗೊಂಡಿದ್ದು, ಪೈಲಟ್ ಹೊರಗೆ ಹಾರಿದ್ದರು. ಈ ಎರಡು ಫೈಟರ್ ಜೆಟ್‌ಗಳ ಜೊತೆಗೆ ಕಾಣೆಯಾದ ಪೈಲಟ್‌ಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದ ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳನ್ನು ಸಹ ಇರಾನ್ ಹೊಡೆದಿದೆ. ಆದಾಗ್ಯೂ, ಹೆಲಿಕಾಪ್ಟರ್‌ಗಳು ಇರಾನಿನ ವಾಯುಪ್ರದೇಶದಿಂದ ಹೊರಬರುವಲ್ಲಿ ಯಶಸ್ವಿಯಾದವು ಎಂದು ಅಮೆರಿಕದ ಇಬ್ಬರು ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
