ಉದಯವಾಹಿನಿ, ಪಾಟ್ನಾ(ಬಿಹಾರ): ಹಾಲಿ ಸಿಎಂ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಏಪ್ರಿಲ್ 10ರಂದು ರಾಜ್ಯಸಭಾ ಸದಸ್ಯರಾಗಿ ಔಪಚಾರಿಕವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಹಾರದ ಬಿಜೆಪಿ ನಾಯಕ ಸಂಜಯ್ ಸರೋಗಿ ಅವರು ಇಂದು (ಭಾನುವಾರ) ದೃಢಪಡಿಸಿದ್ದಾರೆ. ಹೊಸ ಸಚಿವ ಸಂಪುಟ ರಚನೆಯ ಬಗ್ಗೆ ಮಾತನಾಡಿ, ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ಕೇಂದ್ರ ನಾಯಕತ್ವ ಮತ್ತು ಎನ್‌ಡಿಎ ಒಟ್ಟಾಗಿ ಕುಳಿತು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಮಾರ್ಚ್ 5ರಂದು ನಿತೀಶ್ ಕುಮಾರ್ ತಮ್ಮ ನಿರ್ಧಾರದ ಕುರಿತು ಹೃದಯಸ್ಪರ್ಶಿ ಸಂದೇಶ ಹಂಚಿಕೊಂಡಿದ್ದರು. ಬಿಹಾರ ವಿಧಾನಸಭೆಯ ಎರಡೂ ಸದನಗಳು ಹಾಗೂ ಸಂಸತ್ತಿನ ಸದಸ್ಯರಾಗಬೇಕೆಂಬ ಹಂಬಲ ವ್ಯಕ್ತಪಡಿಸಿದ್ದರು. ಅಭಿವೃದ್ಧಿ ಹೊಂದಿದ ಬಿಹಾರವನ್ನು ನಿರ್ಮಿಸುವ ಬದ್ಧತೆಯನ್ನು ಪ್ರತಿಪಾದಿಸಿದ್ದ ಅವರು, ಹೊಸ ಸರ್ಕಾರಕ್ಕೆ ತಮ್ಮ ಸಹಕಾರ ಮತ್ತು ಮಾರ್ಗದರ್ಶನ ನೀಡುವುದಾಗಿ ಹೇಳಿದ್ದರು.
ಎನ್‌ಡಿಎ ನಿತೀಶ್​​ ಕುಮಾರ್ ಅವರ ನಿರ್ಧಾರವನ್ನು ಸ್ವಾಗತಿಸಿತು ಮತ್ತು ಸಂಸದೀಯ ಪ್ರಜಾಪ್ರಭುತ್ವಕ್ಕೆ ಅವರು ಮರಳಿದ್ದನ್ನು ಶ್ಲಾಘಿಸಿತ್ತು. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಹಾರ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ, “ಇದು ಅವರ ಸ್ವಂತ ನಿರ್ಧಾರ. ಒಂದು ಸ್ಥಾನಕ್ಕಾಗಿ ಪ್ರಮಾಣವಚನ ಸ್ವೀಕರಿಸಬೇಕಿದ್ದರೆ ಅವರು ಇನ್ನೊಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿರುವುದು ಸಾಂವಿಧಾನಿಕ ವ್ಯವಸ್ಥೆಯ ಭಾಗ” ಎಂದಿದ್ದರು.
“ನಿತೀಶ್​​ ಕುಮಾರ್ ಅವರು ಬಿಹಾರವನ್ನು ಇಲ್ಲಿಗೆ ತಂದಿದ್ದಾರೆ. ಅವರು ದೆಹಲಿಗೆ ಹೋಗುತ್ತಿದ್ದಾರೆ, ಆದರೆ ಅವರು ಬಿಹಾರದ ರಾಜಕೀಯದ ಮೇಲೆ ಹಿಡಿತ ಸಾಧಿಸುತ್ತಾರೆ. ಅವರ ದೃಷ್ಟಿಕೋನ ಬಿಹಾರಕ್ಕಾಗಿ ಅಲ್ಲ, ಇಡೀ ರಾಜ್ಯಕ್ಕಾಗಿ. ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಅವರು ಬಿಹಾರವನ್ನು ಅಭಿವೃದ್ಧಿ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ ಮತ್ತು ಅವರು ತಮ್ಮ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜ್ಯಕ್ಕೆ ತುಂಬಲಾರದ ನಷ್ಟ” ಎಂದು ಜೆಡಿಯು ಶಾಸಕ ದುಲಾಲ್ ಚಂದ್ರ ಗೋಸ್ವಾಮಿ ಹೇಳಿದ್ದರು.
ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮಾರ್ಜ್​ 30ರಂದು ವಿಧಾನ ಪರಿಷತ್​ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. 2006ರಲ್ಲಿ ನಿತೀಶ್, ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ನಂತರ ಕ್ರಮವಾಗಿ 2012, 2018 ಮತ್ತು 2024 ರಲ್ಲಿ ಸತತ ನಾಲ್ಕು ಅವಧಿಗೆ ಸೇವೆ ಸಲ್ಲಿಸಿದರು. ವಿಧಾನ ಪರಿಷತ್ತಿನ ಸದಸ್ಯತ್ವ ಆರು ವರ್ಷಗಳವರೆಗೆ ಇರುತ್ತದೆ.

 

Leave a Reply

Your email address will not be published. Required fields are marked *

error: Content is protected !!