ಉದಯವಾಹಿನಿ, ಮೈಸೂರು: ಇನ್ನೂ ಎರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ. 2023ರಲ್ಲಿ ಸಿದ್ದರಾಮಯ್ಯ ಸಿಎಂ ಎಂದು ಪಕ್ಷದ ಹೈಕಮಾಂಡ್ ಘೋಷಣೆ ಮಾಡಿತ್ತು. ಅದರ ಅವಧಿ 2028ರ ವರೆಗೆ ಇದೆ. ಹೈಕಮಾಂಡ್ ನೀವೇ 5 ವರ್ಷ ಸಿಎಂ ಎಂದು ಪ್ರತ್ಯೇಕವಾಗಿ ಸ್ಪಷ್ಟೀಕರಣ ಕೊಡುವ ಅವಶ್ಯಕತೆ ಇಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ್‌ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಸಿಎಂ ಬದಲಾವಣೆ ವದಂತಿ ಬಗ್ಗೆ ಪ್ರತಿಕ್ರಿಯಿಸಿದರು. 2013ರಲ್ಲಿ ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿರಲಿಲ್ಲ. ಆದರೂ ಅವರು ಐದು ವರ್ಷ ಸಿಎಂ ಆಗಿದ್ದರು. ಈ ಬಾರಿಯೂ ಪೂರ್ಣಾವಧಿ ಮುಗಿಸಬೇಕು ತಾನೇ ಎಂದರು.

ಹೈ ಕಮಾಂಡ್ ಯಾವ ಗೊಂದಲಗಳನ್ನ ಸೃಷ್ಟಿ ಮಾಡಿಲ್ಲ. ಯಾರು ಏನೇ ಹೇಳಿದರು ಅದು ಮುಖ್ಯ ಅಲ್ಲ. ಹೈಕಮಾಂಡ್ ಯಾವತ್ತಾದರೂ ಸಿದ್ದರಾಮಯ್ಯ ಅವಧಿ ಇಷ್ಟು ಎಂದು ಹೇಳಿದ್ಯಾ? ಬದಲಾವಣೆ ಬಗ್ಗೆ ಮಾತನಾಡಿದ್ದಾರಾ? ಅದರ ಅರ್ಥ ಆ ರೀತಿಯ ಯಾವ ಬೆಳವಣಿಗೆ ಇಲ್ಲ. ಸಿಎಂ ಸ್ಥಾನ ಬದಲಾವಣೆ ಮಾಡಬೇಕಾಗಿರುವುದು ಹೈಕಮಾಂಡ್. ಅಲ್ಲಿಯವರೆಗೆ ಯಾರು ಏನೇ ಮಾತನಾಡಿದ್ರು ಅದು ವೈಯಕ್ತಿಕ ಅಭಿಪ್ರಾಯ ಎಂದರು.
ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಡಿಸಿಎಂ ಆಗಿದ್ದಾರೆ, ಅವರು ನಮ್ಮ ನಾಯಕರು, ಅವರಿಗೆ ಯಾವ ಸಮಸ್ಯೆಯೂ ಆಗಿಲ್ಲ. ನಮ್ಮ ಎಲ್ಲಾ ಶಾಸಕರು ಸಿಎಂ ಸ್ಥಾನಕ್ಕೆ ಅರ್ಹರು ಎಂದು ಸಿಎಂ ವಿಧಾನಸಭೆಯಲ್ಲೇ ಹೇಳಿದ್ದಾರೆ. ಅದರಲ್ಲಿ ನಾನು ಅರ್ಹ ಇನ್ನೊಬ್ಬರು ಎಂಬ ಪ್ರಶ್ನೆಯೇ ಬರುವುದಿಲ್ಲ. ಉಪಚುನಾವಣೆಯ ಫಲಿತಾಂಶಕ್ಕೂ ಬೇರೆ ವಿಚಾರಕ್ಕೆ ಸಂಬಂಧವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

error: Content is protected !!