ಉದಯವಾಹಿನಿ, ದಾವಣಗೆರೆ: ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಸಿಎಂ ಹಾಗೂ ಕಾಂಗ್ರೆಸ್ ಸರ್ಕಾರದ ನಿದ್ದೆಗೆಡಿಸುವಂತೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ದಾವಣಗೆರೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಇದ್ದರೂ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರ ಮಾಡಿಕೊಂಡು ಬಂದಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಅನುಭವಿ ಸಿಎಂ ಆಗಿದ್ದರೂ ಕೂಡ ರಾಜ್ಯದ ಅಭಿವೃದ್ಧಿ ಸಾಧ್ಯವಾಗಿಲ್ಲ. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿಎಂ ಅಹಿಂದ ಸಮುದಾಯವನ್ನೇ ಮರೆತಿದ್ದಾರೆ ಎಂದು ಆರೋಪಿಸಿದರು.
ಈ ಎರಡು ಉಪಚುನಾವಣೆಗಳು ಸಿಎಂ ಹಾಗೂ ಕಾಂಗ್ರೆಸ್ಗೆ ಕಬ್ಬಿಣದ ಕಡಲೆಯಾಗಿದೆ. ಸಿಎಂ ಉಪಚುನಾವಣೆಯಿಂದ ಗಲಿಬಿಲಿಯಾಗಿದ್ದಾರೆ. ಶಕ್ತಿ ಮೀರಿ ನಮ್ಮ ಬಿಜೆಪಿ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಮುಂದಾಗಿದ್ದಾರೆ. ನಮ್ಮ ಕಾರ್ಯಕರ್ತರ ಶ್ರಮವನ್ನು ಬೇರಾವುದೇ ಕಾರ್ಯಕರ್ತರು ಹಾಕಲು ಸಾಧ್ಯವಿಲ್ಲ. ಇದರಿಂದಾಗಿ ನಮ್ಮ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಗೆಲುವು ಸಾಧಿಸುತ್ತಾರೆ. ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂದರು.
ಕಾಂಗ್ರೆಸ್ಸಿನ ಹಣ ಬಲ ಇಲ್ಲಿ ವರ್ಕೌಟ್ ಆಗುವುದಿಲ್ಲ. ಬಿಜೆಪಿ ಜೊತೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಶ್ರಮ ವಹಿಸುತ್ತಿದ್ದಾರೆ. ಎರಡೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಗಾಲೋಟಕ್ಕೆ ನಮ್ಮ ಕಾರ್ಯಕರ್ತರು ಕಡಿವಾಣ ಹಾಕಲಿದ್ದಾರೆ. ಕಾಂಗ್ರೆಸ್ ವಿರುದ್ಧ ಯಾವತ್ತೂ ಈ ಮಟ್ಟಿಗೆ ಮುಸ್ಲಿಮರು ವಿರೋಧ ತೋರಿಸಿರಲಿಲ್ಲ. ಖಾಲಿ ಡಬ್ಬ ತುಂಬಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡುತ್ತಾರೆ. ಖಾಲಿ ಡಬ್ಬ ಯಾರೆನ್ನುವುದು ಸಂತೋಷ್ ಲಾಡ್ ತಿಳಿದುಕೊಳ್ಳಲಿ ಎಂದು ಟಾಂಗ್ ನೀಡಿದರು.
