ಉದಯವಾಹಿನಿ, ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷದಲ್ಲಿ 38ನೇ ದಿನವೂ ದಾಳಿ ಪ್ರತಿದಾಳಿಗಳು ಮುಂದುವರಿದಿವೆ. ಈ ನಡುವೆ ಅಮೆರಿಕ – ಇರಾನ್ ನಡುವೆ ಎರಡು ಹಂತದ ಕದನ ವಿರಾಮದ ಲೆಕ್ಕಾಚಾರ ನಡೆಯುತ್ತಿದೆ. ಮೊದಲ ಹಂತದಲ್ಲಿ 45 ದಿನಗಳ ಕದನ ವಿರಾಮವನ್ನು ಪ್ರಸ್ತಾಪ ಕೇಳಿ ಬಂದಿದ್ದು, ಸಂಪೂರ್ಣ ದಾಳಿಯನ್ನ ನಿಲ್ಲಿಸುವ ಚರ್ಚೆಗಳು ನಡೆಯುತ್ತಿದೆ. ವರದಿಯ ಪ್ರಕಾರ, ಪಾಕಿಸ್ತಾನ , ಈಜಿಪ್ಟ್ ಮತ್ತು ಟರ್ಕಿ ದೇಶದ ಮಧ್ಯವರ್ತಿಗಳ ಮೂಲಕ ಹಾಗೂ ಟ್ರಂಪ್ ಅವರ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ನಡುವಿನ ಪಠ್ಯ ಸಂದೇಶ ವಿನಿಮಯದ ಮೂಲಕ ಮಾತುಕತೆಗಳನ್ನ ನಡೆಸಲಾಗುತ್ತಿದೆ.
ಮೊದಲ ಹಂತದಲ್ಲಿ 45 ದಿನಗಳ ಕದನ ವಿರಾಮ ಪ್ರಸ್ತಾಪ ಕೇಳಿ ಬಂದಿದ್ದು, ಈ ಅವಧಿಯಲ್ಲಿ ಎರಡೂ ಕಡೆ ಯುದ್ಧಕ್ಕೆ ಶಾಶ್ವತ ಅಂತ್ಯ ಹಾಡಲು ಮಾತುಕತೆ ನಡೆಯಲಿದೆ. 2ನೇ ಹಂತದಲ್ಲಿ ಯುದ್ಧವನ್ನು ಕೊನೆಗೊಳಿಸುವ ಪ್ರಸ್ತಾಪ ಇದೆ. ಸಂಭಾವ್ಯ ಕದನ ವಿರಾಮ ಷರತ್ತುಗಳ ಕುರಿತು ಅಮೆರಿಕ – ಇರಾನ್ ಮತ್ತು ಮಧ್ಯಸ್ಥಿಕೆ ಗುಂಪುಗಳು ಚರ್ಚೆಯಲ್ಲಿ ತೊಡಗಿವೆ. ಮಾತುಕತೆಯಲ್ಲಿ ಪ್ರಗತಿ ಕಂಡುಬಂದರೆ, ಅಂತಿಮ ಒಪ್ಪಂದಕ್ಕೆ ಹೆಚ್ಚಿನ ಸಮಯವ ನೀಡಲು ಕದನ ವಿರಾಮವನ್ನು ವಿಸ್ತರಿಸಬಹುದು ಎನ್ನಲಾಗಿದೆ.
