ಉದಯವಾಹಿನಿ, ಭೀಕರ ಭೂಕಂಪ ಮತ್ತು ಪ್ರವಾಹಕ್ಕೆ ತುತ್ತಾಗಿರುವ ಅಫ್ಘಾನಿಸ್ತಾನಕ್ಕೆ ಭಾರತ ನೆರವಿನ ಹಸ್ತ ಚಾಚಿದೆ. ಭೂಕಂಪದಿಂದ ಹಾನಿಗೊಳಗಾದ ಸಂತ್ರಸ್ತರಿಗಾಗಿ ಪರಹಾರ ಸಾಮಗ್ರಿಗಳನ್ನು ಭಾರತ ರವಾನಿಸಿದೆ. ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಈ ಸವಾಲಿನ ಸಮಯದಲ್ಲಿ ಅಫ್ಘಾನ್ ಜನರಿಗೆ ಮಾನವೀಯ ನೆರವು ನೀಡಲು ಭಾರತ ಬದ್ಧವಾಗಿದೆ ಎಂದಿದ್ದಾರೆ.

ಭೂಕಂಪದಿಂದ ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲಿ ಅಫ್ಘಾನ್​ ಜನರಿಗೆ ಅಡುಗೆಮನೆ ಸೆಟ್‌ಗಳು, ನೈರ್ಮಲ್ಯ ಕಿಟ್‌ಗಳು, ಪ್ಲಾಸ್ಟಿಕ್ ಹಾಳೆಗಳು, ಟಾರ್ಪಲಿನ್​​ಗಳು, ಮಲಗುವ ಹಾಸಿಗೆ ಸೇರಿದಂತೆ ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನು ಭಾರತ ತಲುಪಿಸುತ್ತಿದೆ ಎಂದು ಮಾಹಿತಿ ನೀಡಿದರು. ಭಾರತವು ಅಫ್ಘಾನಿಸ್ತಾನದ ಜನರೊಂದಿಗೆ ಸಂಕಷ್ಟದ ಸಮಯದಲ್ಲಿ ಒಗ್ಗಟ್ಟಿನಿಂದ ನಿಲ್ಲುತ್ತದೆ. ಈ ಸವಾಲಿನ ಸಮಯದಲ್ಲಿ ಮಾನವೀಯ ನೆರವು ಮತ್ತು ಬೆಂಬಲವನ್ನು ನೀಡಲು ಬದ್ಧವಾಗಿದೆ ಎಂದು ತಿಳಿಸಿದರು.

ಅಫ್ಘಾನಿಸ್ತಾನದ 25 ಪ್ರಾಂತ್ಯಗಳಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪದಿಂದ ಸಾವನ್ನಪ್ಪಿದವರ ಸಂಖ್ಯೆ 35ಕ್ಕೆ ಏರಿದ್ದು, ಕಳೆದ ಎರಡು ದಿನಗಳಲ್ಲಿ 52 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಭಾರೀ ಮಳೆ ಮತ್ತು ಪ್ರವಾಹದಿಂದಾಗಿ 131 ಮನೆಗಳು ನಾಶವಾಗಿವೆ 650 ಇತರ ಮನೆಗಳು ಭಾಗಶಃ ಹಾನಿಗೊಳಗಾಗಿವೆ. 3,000 ಕ್ಕೂ ಹೆಚ್ಚು ಜೆರಿಬ್‌ಗಳ ಕೃಷಿ ಭೂಮಿಯೂ ಹಾನಿಗೊಳಗಾಗಿದೆ.

ಕಾಬೂಲ್, ಪಂಜ್‌ಶೀರ್, ಲೋಗರ್, ನಂಗರ್‌ಹಾರ್, ಲಘ್ಮನ್ ಮತ್ತು ನುರಿಸ್ತಾನ್ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ ಎಂದು ವಕ್ತಾರ ಮೊಹಮ್ಮದ್ ಯೂಸುಫ್ ಹಮದ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!