ಉದಯವಾಹಿನಿ, ಅಮರಾವತಿ(ಆಂಧ್ರಪ್ರದೇಶ): ಪರೀಕ್ಷೆಯಲ್ಲಿ ನಪಾಸಾಗುವ ಭಯದಲ್ಲಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ದೇವರ ನಾಮಸ್ಮರಣೆ, ದೇವರ ಚಿತ್ರಗಳನ್ನು ಬಿಡಿಸುವುದನ್ನೆಲ್ಲಾ ಹಲವು ಬಾರಿ ಕೇಳಿದ್ದೇವೆ. ಅದೇ ಮಾದರಿ ಅಥವಾ ತುಸು ಭಿನ್ನ ರೂಪದಲ್ಲಿ ಇಲ್ಲೊಬ್ಬ ವಿದ್ಯಾರ್ಥಿ ಪಾಸಾಗಲು ಪ್ರಯತ್ನಿಸಿದ್ದಾನೆ. ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿವೆ. ಇದಕ್ಕೂ ಮೊದಲು ವಿಶಾಖಪಟ್ಟಣದ ವಿದ್ಯಾರ್ಥಿಯೊಬ್ಬ ನೇರವಾಗಿ ಶಿಕ್ಷಣ ಮಂಡಳಿಗೆ ಫೋನ್​ ಕರೆ ಮಾಡಿ, ನಾನು ಕಳಪೆ ಮಟ್ಟದಲ್ಲಿ ಪರೀಕ್ಷೆ ಬರೆದಿದ್ದು ಅನುತ್ತೀರ್ಣನಾಗುವೆ. ಹೀಗಾಗಿ, ಹೇಗಾದರೂ ಮಾಡಿ ನನ್ನನ್ನು ಪಾಸು ಮಾಡಿ ಎಂದು ಅಲ್ಲಿನ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾನೆ. ‘ಉತ್ತರ ಪತ್ರಿಕೆಯಲ್ಲಿ ಹಣ ಇಟ್ಟಿದ್ದೇನೆ’: ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ವಿದ್ಯಾರ್ಥಿ ಫೇಲ್​ ಆಗುವ ಭಯದಲ್ಲಿ ಫಲಿತಾಂಶ ಪ್ರಕಟವಾಗುವ ಮೊದಲು ಮಂಡಳಿಯನ್ನು ಸಂಪರ್ಕಿಸಿದ್ದಾನೆ. ಫೋನ್​ ಕರೆ ಸಂದರ್ಭದಲ್ಲಿ ಆತ, ಅಚ್ಚರಿಯ ವಿಷಯವನ್ನು ಹೇಳಿಕೊಂಡ. ನಾನು ಪರೀಕ್ಷೆಗೆ ಅಧ್ಯಯನ ಮಾಡಿಲ್ಲ, ಪ್ರಶ್ನೆಗಳನ್ನೇ ಉತ್ತರ ಪತ್ರಿಕೆಯಲ್ಲಿ ಮೂರು ಬಾರಿ ಬರೆದಿದ್ದೇನೆ. ಹೀಗಾಗಿ, ನಾನು ಫೇಲ್​ ಆಗುವುದು ಪಕ್ಕಾ. ಇದನ್ನು ತಪ್ಪಿಸಲು ಉತ್ತರ ಪತ್ರಿಕೆಗಳ ಒಳಗೆ ಹಣ ಇಟ್ಟಿದ್ದೇನೆ. ಅದನ್ನು ಪಡೆದು ನನ್ನನ್ನು ಪಾಸು ಮಾಡಿ ಎಂದು ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾನೆ.

ವಿದ್ಯಾರ್ಥಿಯ ಮಾತು ಕೇಳಿ ಅಧಿಕಾರಿಗಳು ಅಚ್ಚರಿಗೊಳಗಾಗಿದ್ದಾರೆ. ಬಳಿಕ, ಆತನಿಗೆ ಮುಂಬರುವ ಸಪ್ಲಿಮೆಂಟರಿ ಪರೀಕ್ಷೆಗಳಿಗೆ ತಯಾರಿ ಮಾಡುವತ್ತ ಗಮನಹರಿಸು ಎಂದು ಸಲಹೆ ನೀಡಿದ್ದಾರೆ. ಇಂಥದ್ದೊಂದು ಕರೆ ಬಂದ ಬಗ್ಗೆ ಮಂಡಳಿಯ ಅಧಿಕಾರಿಗಳು ವಿಶಾಖಪಟ್ಟಣಂನಲ್ಲಿರುವ ಪ್ರಾದೇಶಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ವಿದ್ಯಾರ್ಥಿಯ ಪೋಷಕರಿಗೂ ಈ ಬಗ್ಗೆ ತಿಳಿಸುವಂತೆ ಸೂಚಿಸಿದ್ದಾರೆ.

ಜಿಲ್ಲಾ ಮಟ್ಟದ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಯ ಮಾಹಿತಿ ಪಡೆದು ಅವರ ಪೋಷಕರನ್ನು ಸಂಪರ್ಕಿಸಿದ್ದಾರೆ. ತಮ್ಮ ಮಗನ ಬೇಡಿಕೆ ಮತ್ತು ಉತ್ತರ ಪತ್ರಿಕೆಯನ್ನು ಹಣ ಇಟ್ಟ ಬಗ್ಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಯ ಪೋಷಕರು ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಮುಂದಿನ ಪರೀಕ್ಷೆಗಳಿಗೆ ಗಂಭೀರವಾಗಿ ತಯಾರಿ ನಡೆಸುವಂತೆ ಪುತ್ರನಿಗೆ ಮಾರ್ಗದರ್ಶನ ನೀಡುತ್ತೇವೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿ ಫೇಲ್​: ವಿದ್ಯಾರ್ಥಿ ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಆತ, ಮೊದಲ ವರ್ಷದಲ್ಲಿ ಎರಡು ವಿಷಯಗಳಲ್ಲಿ ನಪಾಸಾಗಿದ್ದಾನೆ. ನಿನ್ನೆ ಪ್ರಕಟವಾದ ಫಲಿತಾಂಶದಲ್ಲಿ ಮೂರು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮಕ್ಕಳು ಪರೀಕ್ಷೆಯ ಫಲಿತಾಂಶ ಒತ್ತಡದಲ್ಲಿ ಏನೇನೋ ಹಾದಿ ಹುಡುಕುತ್ತಾರೆ. ಇದರ ಬದಲು ವಿದ್ಯಾರ್ಥಿಗಳು ಉತ್ತಮ ಮಾರ್ಗದರ್ಶನ ಪಡೆಯಬೇಕು. ಸ್ಥಿರವಾದ ಅಧ್ಯಯನ ಅಭ್ಯಾಸಗಳನ್ನು ಕಾಪಾಡಿಕೊಳ್ಳಬೇಕು. ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಪೂರಕ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!