ಉದಯವಾಹಿನಿ, ಚಿಕ್ಕಮಗಳೂರು: ಅಡುಗೆ ಅನಿಲ ಸಿಲಿಂಡರ್ ಸಮಸ್ಯೆ ಉಲ್ಬಣಿಸಿ ತಿಂಗಳಾಗುತ್ತಾ ಬಂದಿದೆ. ಸಿಲಿಂಡರ್ ಬುಕ್ ಮಾಡಿದ ಜನರು ಗ್ಯಾಸ್ ಗೋಡೌನ್‌ಗಳ ಮುಂದೆಯೇ ಸಾಲುಗಟ್ಟಿ ನಿಂತು ದಿನವಿಡೀ ಕಾಯುತ್ತಿರುವುದು ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ.
ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದಾಗಿ ಜಿಲ್ಲೆಯಲ್ಲಿ ಉಂಟಾಗಿರುವ ಸಿಲಿಂಡರ್ ಅಭಾವ ಇನ್ನೂ ತಪ್ಪಿಲ್ಲ. ಆದರೆ ಜಿಲ್ಲಾಡಳಿತ ಸಿಲಿಂಡರ್‌ಗೆ ಕೊರತೆ ಇಲ್ಲ ಎಂಬ ಸಮಜಾಯಿಷಿ ನೀಡುತ್ತಿದೆ. ಹೀಗಿದ್ದರೂ ಜನರು ಮಾತ್ರ ಇಂದಿಗೂ ದಿನಗಟ್ಟಲೆ ಏಜೆನ್ಸಿಗಳ ಗೋಡೌನ್ ಮುಂದೆ ಸಿಲಿಂಡರ್‌ಗಾಗಿ ಕಾಯುತ್ತಿದ್ದಾರೆ.
ಜಿಲ್ಲಾ ಕೇಂದ್ರ ಚಿಕ್ಕಮಗಳೂರು ಸೇರಿದಂತೆ ಕಡೂರು, ಅಜ್ಜಂಪುರ, ಬೀರೂರು, ತರೀಕೆರೆ ಸೇರಿದಂತೆ ಮಲೆನಾಡು ಭಾಗದಲ್ಲಿಯೂ ಸಿಲಿಂಡರ್‌ಗೆ ಜನರ ಪರದಾಟ ತಪ್ಪಿಲ್ಲ. ಚಿಕ್ಕಮಗಳೂರು ನಗರದ ಗ್ಯಾಸ್ ಗೋಡೌನ್‌ಗಳ ಎದುರು ಜನರು ಬೆಳಗಿನ ಜಾವದಿಂದ ಕಾಯುವಂತಾಗಿದೆ. ಕೆಲವರಿಗೆ ಮಾತ್ರ ಸಿಲಿಂಡರ್ ದೊರೆತರೆ ಮತ್ತೆ ಕೆಲವರು ಬರಿಗೈನಲ್ಲೇ ವಾಪಸ್ ಹೋಗುವಂತಾಗಿದೆ.
ಗ್ರಾಹಕರು ಸಿಲಿಂಡರ್ ಬುಕ್ ಮಾಡಿ ವಾರ ಕಾದರೂ ಮನೆಬಾಗಿಲಿಗೆ ಸಿಲಿಂಡರ್ ಬರುತ್ತಿಲ್ಲ. ಪ್ರಶ್ನಿಸಿದರೆ ಮನೆ ಬಾಗಿಲಿಗೆ ಸಪ್ಲೈ ನೀಡಲು ಸಾಧ್ಯವಿಲ್ಲ ಎಂಬ ಉತ್ತರ ಬರುತ್ತಿದೆ. ಕೆಲವರು ಗೋಡೌನ್ ಬಳಿ ತೆರಳಿದರೆ ಅಲ್ಲಿ ಈಗಾಗಲೇ ನಿಮಗೆ ಸಿಲಿಂಡರ್ ನೀಡಲಾಗಿದೆ ಎಂಬ ಉತ್ತರ ಬರುತ್ತಿದೆ. ಕೆಲ ಗ್ರಾಹಕರ ದೂರವಾಣಿ ಸಂಖ್ಯೆಗೆ ಸಿಲಿಂಡರ್ ಸಿಗದಿದ್ದರೂ ಸಹ ಡೆಲಿವರಿ ಮಾಡಲಾಗಿದೆ ಎಂಬ ಮೆಸೇಜ್ ಬರುತ್ತಿದ್ದು, ಕಾಳ ಸಂತೆಯಲ್ಲಿ ಸಿಲಿಂಡರ್ ಮಾರಾಟವಾಗುತ್ತಿದೆ ಎಂಬ ಅನುಮಾನ ಗ್ರಾಹಕರಿಂದ ವ್ಯಕ್ತವಾಗಿದೆ.
