ಉದಯವಾಹಿನಿ, ಚಿಕ್ಕಮಗಳೂರು: ಕಾಡುಕೋಣದ ದಾಳಿಗೆ ಯುವಕ ಬಲಿಯಾದ ಘಟನೆ ಕಳಸ ತಾಲೂಕಿನ ಮೈದಾಡಿಯ ಯಮಗೊಂಡ ಎಸ್ಟೇಟ್‌ನಲ್ಲಿ ನಡೆದಿದೆ. ಮೃತ ಯುವಕನನ್ನು ಚೇತನ್ (30) ಎಂದು ಗುರುತಿಸಲಾಗಿದೆ. ಕಾಡುಕೋಣದ ದಾಳಿಯಿಂದ ಕೊಂಬು ಚೇತನ್ ಎದೆಗೆ ಚುಚ್ಚಿತ್ತು. ಕೂಡಲೇ ಆತನನ್ನು ಕಳಸದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದಾನೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಆಸ್ಪತ್ರೆಯ ಆವರಣದಲ್ಲಿ ಮಗನನ್ನು ಕಳೆದುಕೊಂಡ ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಕಳಸದಲ್ಲಿ ನಿರಂತರವಾಗಿರೋ ಕಾಡುಕೋಣ ದಾಳಿ ಪ್ರಕರಣಗಳು ನಡೆಯುತ್ತಿವೆ. ಕೆಲವರು ಗಂಭೀರ ಗಾಯಗೊಂಡಿದ್ದಾರೆ. ಇನ್ನೂ ಕೆಲವರು ದಾಳಿಯಿಂದ ಸಾವನ್ನಪ್ಪಿದ್ದಾರೆ. ಕಾಡುಕೋಣಗಳ ಹಾವಳಿಗೆ ಶಾಶ್ವತವಾಗಿ ಬ್ರೇಕ್ ಹಾಕುವಂತೆ ಮಲೆನಾಡಿಗರು ಆಗ್ರಹಿಸಿದ್ದಾರೆ.
