ಉದಯವಾಹಿನಿ, ಗಯಾ (ಬಿಹಾರ): ಪ್ರತಿಜ್ಞೆ ಮಾಡುವುದು ಸಲಭ. ಆದರೆ, ಮಾಡಿದ ಪ್ರತಿಜ್ಞೆಯನ್ನು ಸಾಧಿಸಿ ತೋರಿಸವುದು ಅಷ್ಟು ಸುಲಭದ ಕೆಲಸವಲ್ಲ. ಹೀಗೆ ಮೂರು ವರ್ಷಗಳ ಹಿಂದೆ ಬಿಹಾರದ ಗಯಾ ಜಿಲ್ಲೆಯ ಭಾಲುಹಾರ್ ಗ್ರಾಮದ ಧರ್ಮೇಂದ್ರ ಕುಮಾರ್ ಎಂಬ ಸಮಾಜ ಸೇವಕ ತಮ್ಮೂರಿನಲ್ಲಿ ಶಾಲೆ ಕಟ್ಟುವವರೆಗೂ ಕ್ಷೌರ ಮಾಡಿಸಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಸುದ್ದಿಯಾಗಿದ್ದಾನೆ.
ಇದೀಗ ಅಂದುಕೊಂಡಂತೆ ಶಾಲೆಯ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, ಸದ್ಯದಲ್ಲೇ ಮಕ್ಕಳ ಕಲಿಕೆಗೆ ಮುಕ್ತವಾಗಲಿದೆ. ಹಾಗಾಗಿ ಇದೊಂದು ಅಪರೂಪ ಹಾಗೂ ಖುಷಿ ನೀಡುವ ಘಳಿಗೆ ಎಂದು ಧರ್ಮೇಂದ್ರ ಕುಮಾರ್ ಹೇಳಿಕೊಂಡಿದ್ದಾರೆ. ಪ್ರತಿಜ್ಞೆ ಸ್ವೀಕಾರ: ತಮ್ಮ ಈ ಪ್ರತಿಜ್ಞೆ ಸ್ವೀಕಾರದ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಧರ್ಮೇಂದ್ರ ಕುಮಾರ್, ಒಂದು ಕಾಲದಲ್ಲಿ ನಕ್ಸಲ್ ಪೀಡಿತ ಪ್ರದೇಶವಾಗಿದ್ದ ಗಯಾ ಜಿಲ್ಲೆಯ ತರಾವಪರ್ಹಿ ಗ್ರಾಮದಲ್ಲಿ ಶಿಕ್ಷಣ ಮರೀಚಿಕೆಯಾಗಿತ್ತು. ಮಕ್ಕಳಲ್ಲಿ ಶಿಕ್ಷಣದ ಬೀಜ ಬಿತ್ತಿ ಜ್ಞಾನ, ಸಂಸ್ಕಾರ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವ ಆಶಯವನ್ನು ಕಂಡಿದ್ದೆ. ಆದರೆ, ಓದುವ ಮಕ್ಕಳಿಗೆ ಶಾಲೆ ಇರಲಿಲ್ಲ. ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿತ್ತು. ಸರ್ಕಾರವನ್ನು ಕೇಳಿದಾಗ ಶಾಲೆಯನ್ನು ನಿರ್ಮಿಸಲು ಪ್ರಯತ್ನಿಸಿತಾದರೂ ಫಲ ನೀಡಲಿಲ್ಲ. ಶಾಲೆಯನ್ನು ಕಟ್ಟಬೇಕು ಎಂಬ ಹಠ ಕೈಬಿಡಲಿಲ್ಲ. ಹೋರಾಟ ಮಾಡುವ ಮೂಲಕ ಈ ಗುರಿಯನ್ನು ಸಾಧಿಸಲು ದೇಶಾದ್ಯಂತ ಪ್ರವಾಸ ಮಾಡಿದೆ. ಐಎಎಸ್ ಸಿದ್ಧತೆಯನ್ನು ತ್ಯಜಿಸಿದೆ. ಕುಟುಂಬದ ಜವಾಬ್ದಾರಿಗಳನ್ನು ಬಿಟ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡೆ. ಆದರೆ, ಯಾವುದೂ ಕೆಲಸ ಮಾಡಲಿಲ್ಲ. ಆದರೂ, ಧೈರ್ಯಗೆಡಲಿಲ್ಲ. ಆರಂಭದಲ್ಲಿ, ಜನರು ನನ್ನ ಪ್ರಯತ್ನಗಳನ್ನು ಹುಚ್ಚುತನವೆಂದು ಕರೆದರು. ಉತ್ಸಾಹವು ಎಲ್ಲಾ ಮಿತಿಗಳನ್ನು ಮೀರಿದಾಗ, ಅದು ನಿಜವಾದ ಹುಚ್ಚುತನವಾಗುತ್ತದೆ. ಗ್ರಾಮದಲ್ಲಿ ಶಾಲೆಗೆ ಅಡಿಪಾಯ ಹಾಕಲು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಪ್ರಯತ್ನಿಸಿದೆ. ಕೆಲವೊಮ್ಮೆ ಈ ಹರಸಾಹಸ ಕಂಡು ನನ್ನ ಮೇಲೆ ನನಗೆ ಬೇಸರ ತರಿಸುತ್ತಿತ್ತು ಎಂದು ಶಾಲೆಗಾಗಿ ತಾವು ಪಟ್ಟ ಕಷ್ಟವನ್ನು ಇಲ್ಲಿ ಹೇಳಿಕೊಂಡರು.
