ಉದಯವಾಹಿನಿ, ಪುಣೆ: ಭಾರತೀಯ ವಾಯುಪಡೆಯ (IAF) ಯುದ್ಧ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ರನ್‌ವೇನಲ್ಲಿ ಸಿಲುಕಿಕೊಂಡಿದ್ದರಿಂದ ಸ್ಥಗಿತಗೊಂಡಿದ್ದ ಪುಣೆ ವಿಮಾನ ನಿಲ್ದಾಣದ ಕಾರ್ಯಾಚರಣೆಯು ಶನಿವಾರ ಬೆಳಗ್ಗೆಯಿಂದ ಪುನಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವಿವರ: ಶುಕ್ರವಾರ ರಾತ್ರಿ ಸುಮಾರು 10:25ರ ಸುಮಾರಿಗೆ ವಾಯುಪಡೆಯ ವಿಮಾನವೊಂದು ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ‘ಅಂಡರ್ ಕ್ಯಾರೇಜ್’ ವೈಫಲ್ಯಕ್ಕೊಳಗಾಯಿತು. ಇದರಿಂದಾಗಿ, ವಿಮಾನವು ರನ್‌ವೇ ಮಧ್ಯದಲ್ಲೇ ಸಿಲುಕಿಕೊಂಡಿದ್ದರಿಂದ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ವಿಮಾನದಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ಜೀವಹಾನಿ ಅಥವಾ ನಾಗರಿಕ ಆಸ್ತಿಗೆ ಹಾನಿಯಾಗಿಲ್ಲ ಎಂದು ವಾಯುಪಡೆ ಸ್ಪಷ್ಟಪಡಿಸಿದೆ. ನಿಲ್ದಾಣದಲ್ಲಿ ಯುದ್ಧ ವಿಮಾನ ಸಿಲುಕಿದ ಬಗ್ಗೆ ಮಾಹಿತಿ ನೀಡಿರುವ ಐಎಎಫ್, “ತಾಂತ್ರಿಕ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದ್ದ ಪುಣೆ ವಿಮಾನ ನಿಲ್ದಾಣದ ರನ್‌ವೇ ಅನ್ನು ಈಗ ಸರಿಪಡಿಸಲಾಗಿದ್ದು, ಇತರ ವಿಮಾನಗಳ ಕಾರ್ಯಾಚರಣೆಗೆ ಮುಕ್ತಗೊಳಿಸಲಾಗಿದೆ. ಅಗತ್ಯವಿರುವ ಎಲ್ಲಾ ಸುರಕ್ಷತಾ ತಪಾಸಣೆಗಳನ್ನು ಪೂರ್ಣಗೊಳಿಸಲಾಗಿದೆ. ಹಂತಹಂತವಾಗಿ ವಿಮಾನಗಳ ಸಂಚಾರ ಆರಂಭವಾಗಲಿದೆ. ವಾಯುಪಡೆಯ ಸಿಬ್ಬಂದಿ ರಾತ್ರಿಯಿಡೀ ಶ್ರಮಿಸಿ ಇಂದು ಬೆಳಗ್ಗೆ 8 ಗಂಟೆಗೆ ರನ್‌ವೇ ಅನ್ನು ಸಜ್ಜುಗೊಳಿಸಿದ್ದಾರೆ ಎಂದು ತಿಳಿಸಿದೆ. ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೊಲ್ ಅವರು ಈ ಬಗ್ಗೆ ಸಾಮಾಜಿಕ ಮಾಧ್ಯಮವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, “ರನ್‌ವೇ ಕಾರ್ಯಾಚರಣೆಯನ್ನು ಶೀಘ್ರವಾಗಿ ಪುನಾರಂಭಿಸಲು ಪ್ರಯತ್ನ ಸಾಗಿವೆ. ಈ ಕುರಿತು ವಿಮಾನ ನಿಲ್ದಾಣದ ನಿರ್ದೇಶಕರು ಮತ್ತು ವಾಯುಪಡೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ” ಎಂದು ತಿಳಿಸಿದ್ದಾರೆ.
