ಉದಯವಾಹಿನಿ, ಜಕರ್ತಾ (ಇಂಡೋನೇಷ್ಯಾ): ಇಂಡೋನೇಷ್ಯಾದ ಪಶ್ಚಿಮ ಕಾಲಿಮಂಟನ್ ಪ್ರಾಂತ್ಯದಲ್ಲಿ ಹೆಲಿಕಾಪ್ಟರ್ ಪತನಗೊಂಡು ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ಗುರುವಾರ ತಿಳಿಸಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಕ್ಸಿನ್ಸುವಾ, ಹೆಲಿಕಾಪ್ಟರ್​ ಸಂಪರ್ಕ ಕಳೆದುಕೊಂಡು ಕಣ್ಮರೆಯಾಗಿದ್ದು, ಬಳಿಕ ದಟ್ಟಾರಣ್ಯದಲ್ಲಿ ಅದರ ಅವಶೇಷಗಳು ಪತ್ತೆಯಾಗಿವೆ. ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ರಕ್ಷಣಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ನೂರ್ರಾಚ್ಮನ್ ಗಿಂಧಾ ದ್ರಾಧಿಜ್ಯಾ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದೆ.

ಇದುವರೆಗೆ ನಾಲ್ಕು ಮೃತದೇಹಗಳನ್ನು ಹೊರತೆಗೆದು ಸ್ಥಳಾಂತರಿಸಲಾಗಿದೆ. ಇನ್ನೂ ಮೂರು ಮೃತದೇಹಗಳಿಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲದೆ, ಮತ್ತೊಂದು ಶವದ ಪತ್ತೆ ಕಾರ್ಯ ನಡೆಯುತ್ತಿದೆ. ಹೆಲಿಕಾಪ್ಟರ್​ನ ಅವಶೇಷಗಳು ಸೆಕಾಡೌ ದಟ್ಟ ಅರಣ್ಯದಲ್ಲಿ ಪತ್ತೆಯಾಗಿವೆ. ಜಂಟಿ ರಕ್ಷಣಾ ತಂಡಗಳು ಸಕ್ರಿಯ ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಇಂಡೋನೇಷ್ಯಾ ರಾಷ್ಟ್ರೀಯ ಪೊಲೀಸರು ಹೇಳಿದ್ದಾರೆ.

ಇಂಡೋನೇಷ್ಯಾ ರಾಷ್ಟ್ರೀಯ ಪೊಲೀಸರ ಅಧಿಕೃತ ವೆಬ್‌ಸೈಟ್ ಪ್ರಕಾರ, ಪತನಗೊಂಡ ಹೆಲಿಕಾಪ್ಟರ್ ಅನ್ನು ಪಿಟಿ ಮ್ಯಾಥ್ಯೂ ಏರ್ ಏರ್‌ಬಸ್ ಹೆಚ್-130 (ಪಿಕೆ-ಸಿಎಫ್‌ಎಕ್ಸ್) ಎಂದು ಗುರುತಿಸಲಾಗಿದೆ. ಕ್ಸಿನ್ಹುವಾ ವರದಿ ಪ್ರಕಾರ, ಹೆಲಿಕಾಪ್ಟರ್​ನಲ್ಲಿ ಎಂಟು ಜನರಿದ್ದರು.

ಗುರುವಾರ ರಾತ್ರಿಯವರೆಗೆ ಶೋಧ ಕಾರ್ಯ ಸಾಗಿದ್ದು, ಕತ್ತಲೆ ಮತ್ತು ಕ್ಲಿಷ್ಟಕರ ಭೂ ಪ್ರದೇಶದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಶುಕ್ರವಾರ ಬೆಳಗ್ಗೆಯಿಂದ ಕಾರ್ಯಾಚರಣೆ ಪುನರಾರಂಭಿಸಿ, ಹೆಲಿಕಾಪ್ಟರ್​ ಅವಶೇಷಗಳನ್ನು ಕತ್ತರಿಸಿ ಅದರಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ.

ಹೆಲಿಕಾಪ್ಟರ್​ ಗುರುವಾರ ಸ್ಥಳೀಯ ಸಮಯ ಮಧ್ಯಾಹ್ನ 3.25ರ ಸುಮಾರಿಗೆ ಸಂಪರ್ಕ ಕಡಿದುಕೊಂಡಿತ್ತು. ಸಂಪರ್ಕದ ಕೇಂದ್ರ ಬಿಂದುವಿನಿಂದ ಮೂರು ಕಿಲೋಮೀಟರ್‌ಗಳಷ್ಟು ದೂರದಲ್ಲಿ ಅವಶೇಷಗಳು ಪತ್ತೆಯಾಗಿವೆ. ವೈಮಾನಿಕ ಮೇಲ್ವಿಚಾರಣೆಯಿಂದ ಘಟನಾ ಸ್ಥಳವನ್ನು ಗುರುತಿಸಲಾಗಿದೆ. ಕಾರ್ಯಾಚರಣೆಗೆ ಅನುಕೂಲವಾಗುವಂತೆ ಭೂ ಪ್ರದೇಶದಿಂದಲೂ ರಕ್ಷಣಾ ಪಡೆಗಳನ್ನು ಕಳುಹಿಸಲಾಗಿದೆ ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ (ಬಸರ್ನಾಸ್) ಕಾರ್ಯಾಚರಣೆ ಉಪ ಅಧಿಕಾರಿ ಎ.ಡಿ.ಪ್ರಕೋಸೊ ತಿಳಿಸಿದ್ದಾರೆ.

ಅಪಘಾತದ ಸ್ಥಳದ ಭೂಪ್ರದೇಶ ಮತ್ತು ಅನಿರೀಕ್ಷಿತ ಹವಾಮಾನ ಪರಿಸ್ಥಿತಿಯಿಂದಾಗಿ ಅಲ್ಲಿಗೆ ತಲುಪುವುದು ಕಷ್ಟಕರವಾಗಿತ್ತು. ಬುಕಿಟ್ ಪುಂಟಕ್ ಪ್ರದೇಶದಲ್ಲಿ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ನಿವಾಸಿಗಳು ತಿಳಿಸಿದ್ದರು. ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಹತ್ತಿರದ ಹುಲು ಪೆನಿಟಿ ಗ್ರಾಮದಲ್ಲಿ ಆಂಬ್ಯುಲೆನ್ಸ್‌ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!