ಉದಯವಾಹಿನಿ, ಬೆಂಗಳೂರು: ನಾವು ಮಹಿಳಾ ಮೀಸಲಾತಿಯ ಪರವಾಗಿ ಇದ್ದೇವೆ. ಪ್ರಧಾನಿ ಮೋದಿ ಅವರ ಸುಳ್ಳು ಆರೋಪಗಳನ್ನು ಖಂಡಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಂಡಾಮಂಡಲವಾಗಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʻಕಾಂಗ್ರೆಸ್ ಮಿತ್ರ ಪಕ್ಷಗಳಿಂದ ಭ್ರೂಣ ಹತ್ಯೆʼ ಎನ್ನುವ ಪ್ರಧಾನಿ ಹೇಳಿಕೆಯನ್ನು ಖಂಡಿಸಿದರು. ಮಹಿಳಾ ಮೀಸಲಾತಿ ರಿಕರ್ವೇಶನ್ ಬಿಲ್ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಬಿಲ್ ಎರಡು ಬೇರೆ ಬೇರೆ, ಆದ್ರೆ ಇವರು ಬೇರೆ ರೀತಿ ಬಿಂಬಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕ್ಷೇತ್ರ ಪುನರ್ ವಿಂಗಡೆನೆ ಮಸೂದೆ ವಿಫಲವಾಗಿದೆ. ಇದು ಎಸ್ಸಿ-ಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗುತ್ತೆ. ದಕ್ಷಿಣ ಭಾರತದ ರಾಜ್ಯಗಳಿಗೆ ವಿರುದ್ಧವಾಗಿದೆ. ಹಾಗಾಗಿ, ಇದನ್ನ ನಾವು ಎಲ್ಲಾ ಪಕ್ಷಗಳು ವಿರೋಧ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ರು.
ಮಹಿಳಾ ಮೀಸಲಾತಿ ಬಿಲ್ ಡಿಲಿಮೇಟೇಷನ್ ಬಿಲ್‌ಗೆ ವ್ಯತ್ಯಾಸವಿದೆ. ಮೋದಿ ಅವರು 2023 ರಲ್ಲಿ ನಾರಿ ಶಕ್ತಿ ಬಿಲ್ ಮಂಡನೆ ಮಾಡಿದ್ರು, ಇದಕ್ಕೆ ಎಲ್ಲಾ ಪಕ್ಷದ ನಾಯಕರು ಸಹಮತ ವ್ಯಕ್ತಪಡಿಸಿದ್ರು. 40 ತಿಂಗಳಾದ್ರೂ ಇದನ್ನ ಮೋದಿ ಯಾಕೆ ಮುಂಚೂಣಿಗೆ ತಂದಿರಲಿಲ್ಲ? ಏಕೆ ಅಧಿಸೂಚನೆ ಹೊರಡಿಸರಲಿಲ್ಲ? ಇದನ್ನ ನಾನು ಖಂಡಿಸ್ತಿನಿ. ಮೋದಿ ಅವರು ರಾಜಕೀಯ ದಾಳ ಉರುಳಿಸ್ತಿದ್ದಾರೆ. ನಾವು ಮಹಿಳಾ ಮೀಸಲಾತಿ ಪರವಾಗಿಯೇ ಇದ್ದೇವೆ. ಮೋದಿ ಅವರ ಹೇಳಿಕೆಯನ್ನ ವಿರೋಧಿಸ್ತೇವೆ. 2010 ರಲ್ಲಿ ಈ ಬಿಲ್ ರಾಜ್ಯಸಭೆಯಲ್ಲಿ ಮಂಡನೆ ಮಾಡಿದ್ವು ನಾವು, ಬಹುಮತ ಇಲ್ಲದೇ ಈ ಬಿಲ್ ಪಾಸ್ ಆಗಲಿಲ್ಲ ಎಂದು ಹೇಳಿದರು.
