ಉದಯವಾಹಿನಿ, ಗದಗ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿರುವ ಪ್ರಸಿದ್ಧ ಮುಕ್ತಿ ಮಂದಿರಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಡಿಕೆಶಿ ಅವರ ದಿಢೀರ್ ಭೇಟಿಯ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಮುಕ್ತಿಮಂದಿರವು ಬಾಳೆಹೊನ್ನೂರು ರಂಭಾಪುರಿ ಪೀಠದ ಶಾಖಾ ಮಠವಾಗಿದೆ.
ಪೂಜೆಗೂ ಮುನ್ನ ಮುಕ್ತಿ ಮಂದಿರದ ಸ್ವಾಮೀಜಿ ವಿಮಲ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಅವರು ಹಾರ ಹಾಕಿ ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಿದರು. ಬಳಿಕ ಕೆಲವೇ ಕೆಲ ಮುಖಂಡರೊಂದಿಗೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ನಡೆಯುವ ವೇಳೆ ದೇವಸ್ಥಾನದ ಬಾಗಿಲುಗಳನ್ನು ಬಂದ್ ಮಾಡಲಾಗಿತ್ತು. ಇದಕ್ಕೂ ಮೊದಲು ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿಸಿಎಂ ಡಿಕೆಶಿ ಅವರಿಗೆ ಭವ್ಯ ಸ್ವಾಗತ ನೀಡಿದರು. ಕ್ರೇನ್ ಮೂಲಕ ಭಾರೀ ಹಾರ ಹಾಕಿ ಸ್ವಾಗತಿಸಿದ ಕಾರ್ಯಕರ್ತರು, ಡಿಕೆ ಡಿಕೆ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಹಾಗೆಯೇ ಮುಂದಿನ ಸಿಎಂ ಎಂದು ಕೂಗಿ ಗಮನ ಸೆಳೆದರು.ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಕುಳಿತಿರುವ ಜಾಗಕ್ಕೆ ಶಕ್ತಿ ಇದೆ. ಸಮಯ ಬರಲಿ, ಕಾಲವೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ಮುಕ್ತಿ ಮಂದಿರದ ಮಹತ್ವವನ್ನು ಉಲ್ಲೇಖಿಸಿದ ಡಿಕೆಶಿ, ಇದು ಬಹಳ ವಿಶೇಷ ಮತ್ತು ಪವಿತ್ರ ಸ್ಥಳ. ವೀರ ಗಂಗಾಧರ್ ಅಜ್ಜನ ಐಕ್ಯ ಕ್ಷೇತ್ರ. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗುತ್ತದೆ ಅಂತಾ ಅಜ್ಜ ಹೇಳಿದ್ದರು. ಎಲ್ಲಾ ಜಾತಿ, ಧರ್ಮವನ್ನು ಒಟ್ಟುಗೂಡಿಸುವ ಕಾರ್ಯವನ್ನು ಇಲ್ಲಿ ನಡೆಯುತ್ತಿದೆ, ಇದು ಅಜ್ಜನವರ ಕೊನೆಯ ಯಾತ್ರೆಯ ಸ್ಥಳ ಎಂದರು. ಇಲ್ಲಿ 5 ಸಾವಿರ ಲಿಂಗಗಳು (ತ್ರಿಕೋಟಿ ಲಿಂಗ) ಸ್ಥಾಪನೆಗೆ ಸಂಕಲ್ಪ ನಡೆದಿದೆ. ಈಗಾಗಲೇ ಭಕ್ತರು ತಮ್ಮ ಶಕ್ತಿಯ ಅನುಸಾರ ಲಿಂಗಗಳನ್ನು ಮಾಡಿಸಿ ದೇಣಿಗೆ ನೀಡುತ್ತಿದ್ದಾರೆ. ನಾನು ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿದ್ದೇನೆ. ಈಗಾಗಲೇ ಇಲ್ಲಿ ಸಮುದಾಯ ಭವನ ಆಗಿದೆ. ಇಲ್ಲಿ ಅನ್ನದಾಸೋಹ ಮುಖ್ಯ. ರಾಜಕೀಯ ಏನೇ ಇರಲಿ, ಸಂಸ್ಕಾರ ಮತ್ತು ಧರ್ಮ ಅಗತ್ಯ. ಧರ್ಮ ಕಾಪಾಡುತ್ತದೆ ಎಂದು ಅಭಿಪ್ರಾಯಪಟ್ಟರು.
