ಉದಯವಾಹಿನಿ, ಮೈಸೂರು : ಸರಗೂರು ತಾಲೂಕಿನ ಹಾದನೂರು ಗ್ರಾಮದ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಎರಡು ದಿನಗಳ ಹಿಂದೆ ಹುಲಿಯು ಕಾಡಂಚಿನ ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಳ್ಳುತ್ತಿದ್ದರಿಂದ ಜನ ಭಯಭೀತರಾಗಿದ್ದರು. ಈವರೆಗೆ ಹುಲಿ ಸುಮಾರು 15ಕ್ಕೂ ಹೆಚ್ಚು ಜಾನುವಾರುಗಳನ್ನು ತಿಂದು ತೇಗಿತ್ತು. ಶುಕ್ರವಾರ ಶುಂಠಿ ಕೆಲಸಕ್ಕೆ ಕೂಲಿ ಕಾರ್ಮಿಕರು ಹೋಗುತ್ತಿದ್ದಾಗ ಅವರಿಗೆ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಇದಾದ ಬಳಿಕ ಗ್ರಾಮಸ್ಥರು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಗ್ರಾಮದ ಸಮೀಪದಲ್ಲೇ ಹುಲಿ ಕಾಣಿಸಿಕೊಂಡಿದ್ದರಿಂದ ಜನ ಭಯಗೊಂಡು ಅರಣ್ಯ ಇಲಾಖೆ ಕೂಡಲೇ ಹುಲಿ ಸೆರೆಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ತಿರುಗಾಡಿದ ಹೆಜ್ಜೆ ಗುರುತುಗಳನ್ನು ಪರಿಶೀಲನೆ ನಡೆಸಿದ್ದರು. ನಂತರ ಡಿಸಿಎಫ್ ಪ್ರಭಾಕರನ್, ಎಸಿಎಫ್ ಪರಮೇಶ್ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸೆರೆ ಕಾರ್ಯಾಚರಣೆ ಕೈಗೊಂಡರು.
ಸಂಜೆ ಎರಡು ಸಾಕಾನೆಗಳ ಮೂಲಕ ಡ್ರೋನ್ ಕ್ಯಾಮರಾವನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಶನಿವಾರ ರಾತ್ರಿ 9 ಕ್ಕೆ ಹುಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ, ಸುತ್ತಮುತ್ತಲಿನ ಜನತೆ ಆತಂಕದಿಂದ ದೂರವಾಗಿದ್ದಾರೆ.
8 ವರ್ಷದ ಹುಲಿಗೆ ಹಲ್ಲು ಮುರಿದಿದ್ದು, ಕಾಡಿನಲ್ಲಿ ಬೇಟೆಯಾಡಲು ಸಾಧ್ಯವಾಗದೇ ಸಾಕು ಪ್ರಾಣಿಗಳನ್ನು ತಿಂದು ಗ್ರಾಮದಲ್ಲಿ ಓಡಾಡುತ್ತಿತ್ತು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಹೆಡಿಯಾಲ, ನುಗು, ಮೊಳೆಯೂರು ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಭಾಗಿಯಾಗಿದ್ದರು.
ಹುಲಿ ಸೆರೆಯಾದ ಊರಲ್ಲಿ ಮತ್ತೆರಡು ಹುಲಿ ಪ್ರತ್ಯಕ್ಷ (ಚಾಮರಾಜನಗರ): ಇತ್ತೀಚಿಗೆ ಗುಂಡ್ಲುಪೇಟೆ ತಾಲೂಕಿನ ಚೆನ್ನಮಲ್ಲಿಪುರ ಗ್ರಾಮದ ರೈತರ ಜಮೀನಿನ ಬಾಳೆತೋಟ ಹಾಗೂ ಆಸುಪಾಸಿನಲ್ಲಿ ಮರಿಯೊಟ್ಟಿಗೆ ತಾಯಿ ಹುಲಿ ವಾಸ್ತವ್ಯ ಹೂಡಿತ್ತು. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ರೈತರಲ್ಲಿ ಆತಂಕ ಸೃಷ್ಟಿಯಾಗಿತ್ತು. ಹೀಗಾಗಿ, ಹುಲಿಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ಡ್ರೋನ್ ಕ್ಯಾಮೆರಾ ಮೂಲಕ ನಿಗಾ ವಹಿಸಿತ್ತು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಅರಣ್ಯ ವಲಯ ವ್ಯಾಪ್ತಿಯ ಚೆನ್ನಮಲ್ಲಿಪುರ ಗ್ರಾಮದ ರೈತ ನಾಗಪ್ಪ ಎಂಬವರ ಜಮೀನಿನಲ್ಲಿ ಅಂದಾಜು ಒಂದೂವರೆ ವರ್ಷದ ಗಂಡು ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದು, ಮೈಸೂರಿನ ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದರು. ಇದಾದ ಬಳಿಕ ಮರಿಯೊಂದಿಗೆ ತಾಯಿ ಹುಲಿ ಓಡಾಟ ನಡೆಸುತ್ತಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
