ಉದಯವಾಹಿನಿ, ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ ಹಾದುಹೋಗುತ್ತಿದ್ದ 2 ಭಾರತೀಯ ಟ್ಯಾಂಕರ್‌ಗಳ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಭಾರತವು ದೇಶದಲ್ಲಿರುವ ಇರಾನ್ ರಾಯಭಾರಿಗೆ ಸಮನ್ಸ್ ನೀಡಿದೆ. ಹಾರ್ಮುಜ್ ಜಲಸಂಧಿ ಮೂಲಕ ಹಾದುಹೋಗುತ್ತಿದ್ದ ವೇಳೆ ಕ್ವೆಶ್ಮ್ ಮತ್ತು ಲಾರಕ್ ದ್ವೀಪಗಳ ನಡುವಿನ ಸಮುದ್ರದಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿ ಬಳಿಕ ತೈಲ ಟ್ಯಾಂಕರ್‌ಗಳು ಅಲ್ಲಿಂದ ವಾಪಸ್ ಆಗಿವೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳ ಹಡಗುಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಿದ ಬಳಿಕ ಸುಮಾರು 9 ಭಾರತೀಯ ಹಡಗುಗಳು ಜಲಸಂಧಿ ಮೂಲಕ ಹಾದುಹೋಗಿವೆ.
ಇಂದು ಕೂಡ ಜಲಸಂಧಿ ದಾಟುತ್ತಿದ್ದ ಹಡಗುಗಳ ಮೇಲೆ ಯಾವುದೇ ಸೂಚನೆ ನೀಡದೇ ಗುಂಡಿನ ದಾಳಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಭಾರತವು ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಅವರಿಗೆ ಸಮನ್ಸ್ ನೀಡಿದೆ. ಜೊತೆಗೆ ರಾಯಭಾರ ಕಚೇರಿಯಲ್ಲಿ ಔಪಚಾರಿಕ ಪ್ರತಿಭಟನೆ ದಾಖಲಿಸಿದೆ.
