ಉದಯವಾಹಿನಿ, ಪಣಜಿ: ಕರಾವಳಿ ರಾಜ್ಯವನ್ನು ದೂಷಿಸುವ ಸಾಮಾಜಿಕ ಜಾಲತಾಣಗಳ ಖಾತೆ ಮೇಲೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ(ಐಟಿ) ತೀವ್ರ ನಿಗಾ ವಹಿಸಲಿದೆ ಎಂದು ಗೋವಾ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರೋಹನ್ ಖೌಂಟೆ ಬುಧವಾರ ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹೆಸರಿಗೆ ಧಕ್ಕೆ ತರುವಂತಹ ಸಾಮಾಜಿಕ ಜಾಲತಾಣಗಳ ಖಾತೆ ಮೇಲೆ ನಿಗಾ ವಹಿಸಲು ಈಗಾಗಲೇ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೈಬರ್ ಕ್ರೈಂ ಸೆಲ್‌ಗೆ ಆದೇಶಿಸಿದ್ದಾರೆಂದು ಖೌಂಟೆ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಕೆಲವರು, ಗೋವ ಪ್ರವಾಸಕ್ಕೆ ಬಂದು, ಇಲ್ಲಿನ ಅನೇಕ ಸ್ಥಳಗಳ ಕುರಿತು ವಿಡಿಯೊ (ಮೈಕ್ರೋಬ್ಲಾಗಿಂಗ್) ಮಾಡುತ್ತಾ, ತಪ್ಪು ಮಾಹಿತಿಗಳನ್ನು ಈ ವೇದಿಕೆಗಳ ಮೂಲಕ ಹರಡುತ್ತಿದ್ದಾರೆ. ಆ ಮೂಲಕ ಅಗ್ಗದ ಜನಪ್ರಿಯತೆ ಪಡೆಯಲು ನೋಡುತ್ತಿದ್ದಾರೆ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಭಾವಿ ಖಾತೆಗಳ ಮೇಲೆ ಪ್ರವಾಸೋದ್ಯಮ ಮತ್ತು ಐಟಿ ಇಲಾಖೆ ನಿಗಾ ವಹಿಸಿದೆ ಎಂದರು.
ಮಂಗಳವಾರ ಗೋವಾ ವಿಧಾನಸಭೆ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸಿದ ವಾಸ್ಕೋ ಶಾಸಕ ದಾಜಿ ಸಲ್ಕರ್, ‘ರಾಜ್ಯದ ಹೆಸರು ಹಾಗೂ ಇಲ್ಲಿನ ಧಾರ್ಮಿಕ ವಿಚಾರಗಳಿಗೆ ಧಕ್ಕೆ ತರುವಂತಹ ವಿಷಯಗಳನ್ನು ಇನ್‌ಸ್ಟಾಗ್ರಾಮ್ ಖಾತೆದಾರರು ತಮ್ಮ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.
You may have missed
January 31, 2026
