ಉದಯವಾಹಿನಿ, ಬೀದರ್: ತರಕಾರಿ ತರಲು ಹೋಗಿ ಯುವಕ ಸಾವನ್ನಪ್ಪಿದ್ದು, ಬಿಸಿಲಿನ ಝಳಕ್ಕೆ ಮಗ ಬಲಿಯಾಗಿದ್ದಾನೆಂದು ತಂದೆ ಗೋಳಾಡಿದ್ದಾರೆ. ಈ ಘಟನೆ ಬೀದರ್ ಜಿಲ್ಲೆಯ ಕಮಲನಗರ ಪಟ್ಟಣದ ಡಿಗ್ಗಿ ರೋಡ್ ಬಳಿ ನಡೆದಿದೆ. ಯುಪಿ ಮೂಲದ ಮೊಹ್ಮದ್ ಸಮೀರ್ ಅಹ್ಮದ್ (20) ಸಾವನ್ನಪ್ಪಿದ ದುರ್ದೈವಿ ಯುವಕ. ಗರಿಷ್ಠ ತಾಪಮಾನ ಸಹಿಸಲಾರದೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಘಟನೆ ನಡೆದ ದಿನ ಯುವಕ ತರಕಾರಿ ತರಲು ಹೋಗಿದ್ದ. ಬಳಿಕ ಮನೆಗೆ ವಾಪಸ್ಸಾಗುವಾಗ ತಲೆ ತಿರುಗಿದಂತಾಗಿದ್ದು, ಕೂಡಲೇ ಸಮೀಪದಲ್ಲಿಯೇ ಇದ್ದ ಮೆಕಾನಿಕ್ ಅಂಗಡಿಯಲ್ಲಿ ನೀರು ಕುಡಿದು ವಿಶ್ರಾಂತಿ ಪಡೆದಿದ್ದ. ಸ್ವಲ್ಪ ಹೊತ್ತಾದ ಮೇಲೆ ಮನೆಗೆ ಮರಳುವಾಗ ಡಿಗ್ಗಿ ಗ್ರಾಮದ ರಸ್ತೆ ಬಳಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಬಿಸಿಲಿನಿಂದಲೇ ಮಗ ಸಾವನ್ನಪ್ಪಿದ್ದಾನೆ ಎಂದು ತಂದೆ ಲಯಿಕ್ ಅಹ್ಮದ್ ದೂರು ನೀಡಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
