ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಲೇ ಇದೆ. ಇನ್ನು ಬೆಂಗಳೂರು ನಗರದಲ್ಲಿ ಬಿರು ಬಿಸಿಲಿಗೆ ಜನ ಹೊರಗೆ ಓಡಾಡದಂತಾಗಿದೆ. ನಗರದ ಪ್ರಮುಖ ಕೆರೆಗಳು ಬಿಸಿಲ ತಾಪಕ್ಕೆ ಬತ್ತುತ್ತಿವೆ.
ಬೆಂಗಳೂರಿನಲ್ಲಿ ಬಿಸಿಲ ಧಗೆ ಮತ್ತಷ್ಟು ಭೀಕರವಾಗುತ್ತಿದೆ. ಜನ ಬಿಸಿಲ ಬೇಗೆಗೆ ರಸ್ತೆಗಳಲ್ಲಿ ಸಂಚಾರವನ್ನೇ ಕಡಿಮೆ ಮಾಡಿದ್ದಾರೆ. ಛತ್ರಿ, ಟೋಪಿಗಳ ಮೊರೆ ಹೋಗುತ್ತಿದ್ದಾರೆ. ಕುಡಿಯುವ ನೀರಿಗಾಗಿ ದಿನದಿಂದ ದಿನಕ್ಕೆ ಬೆಂಗಳೂರಿಗರು ಪರದಾಡುವಂತಾಗಿದೆ. ಇದೀಗ ಬಿಸಿಲ ಹೊಡೆತ ಬೆಂಗಳೂರಿನ ಜೀವನಾಡಿಯಾಗಿರುವ ಬೆಂಗಳೂರಿನ ಕೆರೆಗಳ ಮೇಲೆಯೂ ಬೀಳುತ್ತಿದೆ. ಹಂತ ಹಂತವಾಗಿ ಬಿಸಿಲಿಗೆ ಕೆರೆಗಳು ಸೊರಗಿ ಹೋಗುತ್ತಿವೆ. ನಗರದ ಲಾಲ್‌ಬಾಗ್ ಇದಕ್ಕೆ ಸಾಕ್ಷಿಯಂತಿದೆ. ಇನ್ನು ನಗರದ ಮತ್ತೊಂದು ಪ್ರಮುಖ ಕೆರೆ ಸ್ಯಾಂಕಿ ಕೆರೆ. ಸ್ಯಾಂಕಿ ಕೆರೆಯಲ್ಲೂ ಐದಾರು ಅಡಿಯಷ್ಟು ನೀರು ಇಳಿದು ಹೋಗಿದೆ. ಹೌದು, ಉದ್ಯಾನ ನಗರಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ದಶಕಗಳ ಇತಿಹಾಸ ಇರುವ ಕೆರೆಯೊಂದು ಬತ್ತುತ್ತಿರುವುದು ನಗರದಲ್ಲಿ ಹೆಚ್ಚುತ್ತಿರುವ ತಾಪಮಾನಕ್ಕೆ ಸಾಕ್ಷಿಯಾಗಿದೆ.
