ಉದಯವಾಹಿನಿ, ಎರ್ನಾಕುಲಂ(ಕೇರಳ): ಆತಿಥ್ಯಕ್ಕೆ ಕೇರಳ ಹೆಸರಾದ ರಾಜ್ಯ. ಇದನ್ನು ತೋರಿಸುವ ಹೃದಯಸ್ಪರ್ಶಿ ಘಟನೆಯೊಂದು ಇತ್ತೀಚಿಗೆ ನಡೆಿದಿದೆ. ಕೊಚ್ಚಿಯಲ್ಲಿ ನಗರ ಪ್ರದಕ್ಷಿಣೆ ಮಾಡಿದ ಬಳಿಕ ವಿದೇಶಿ ಮಹಿಳೆಯೊಬ್ಬರು ತಮ್ಮ ದುಬಾರಿ ಬೆಲೆಯ ಐಫೋನ್ ಅನ್ನು ಕ್ಯಾಬ್‌ನಲ್ಲೇ ಮರೆತು ಬಿಟ್ಟು ಹೋಗಿದ್ದರು. ಇದನ್ನು ಕಂಡ ಚಾಲಕ ಮಹಿಳೆ ಇದ್ದಲ್ಲಿಗೇ ಹೋಗಿ ಪ್ರಯಾಣದ ದಾಖಲೆಗಳು ಮತ್ತು ಅಮೂಲ್ಯ ಮಾಹಿತಿಗಳಿದ್ದ ಮೊಬೈಲ್ ಫೋನ್ ಹಿಂದಿರುಗಿಸಿದ್ದಾರೆ. ಟ್ಯಾಕ್ಸಿ ಚಾಲಕನ ಪ್ರಾಮಾಣಿಕತೆ ಪ್ರವಾಸಿ ಮಹಿಳೆಯ ಮನಸ್ಸು ಗೆದ್ದಿತು.
ಪಲ್ಲುರುತಿ ಮೂಲದ ಮತ್ತು ಎರ್ನಾಕುಲಂ ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿಯ ಅಡಿಯಲ್ಲಿ ಕ್ಯಾಬ್ ಚಾಲಕರಾಗಿರುವ ವಿನೋದ್, ಐಷಾರಾಮಿ ಕ್ರೂಸ್ ಹಡಗು ಅಜಮಾರಾದಲ್ಲಿ ನಗರಕ್ಕೆ ಆಗಮಿಸಿದ್ದ ಇಸ್ರೇಲ್ ಮೂಲದ ಆಸ್ಟ್ರೇಲಿಯಾದ ಪ್ರವಾಸಿ ಜಾಕ್ವೆಲಿನ್ ಅಬ್ರಹಾಂ ಅವರನ್ನು ನಗರ ಪ್ರದಕ್ಷಿಣೆಯ ಬಳಿಕ ತಮ್ಮ ವಾಹನದಿಂದ ಇಳಿಸಿ ಹೋಗಿದ್ದರು. ಇದಾದ ಬಳಿಕ ವಿನೋದ್, ತನ್ನ ಟ್ಯಾಕ್ಸಿ ಸ್ವಚ್ಛಗೊಳಿಸುತ್ತಿದ್ದಾಗ ಸೀಟಿನ ಕೆಳಗೆ ಮೊಬೈಲ್ ಬಿದ್ದಿರುವುದನ್ನು ನೋಡಿದ್ದಾರೆ.ಇನ್ನೊಂದೆಡೆ, ತಾನು ಫೋನ್ ಕಳೆದುಕೊಂಡಿರುವುದರ ಅರಿವೇ ಇಲ್ಲದ ಜಾಕ್ವೆಲಿನ್ ತಾವು ಬಂದಿದ್ದ ಹಡಗಿಗೆ ಮರಳಿದ್ದರು. ಆದರೆ ಸ್ವಲ್ಪ ಹೊತ್ತಿನ ನಂತರ ತಮ್ಮ ಪ್ರಯಾಣದ ಪ್ರಮುಖ ವಿವರಗಳು ಮತ್ತು ವೈಯಕ್ತಿಕ ಮಾಹಿತಿ ಒಳಗೊಂಡ ಫೋನ್ ಕಳೆದು ಹೋಗಿರುವುದು ಗೊತ್ತಾಗಿದೆ. ತಕ್ಷಣ ಈ ವಿಚಾರವನ್ನು ಪ್ರವಾಸೋದ್ಯಮ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ನಂತರ ಅಧಿಕಾರಿಗಳ ಸಹಾಯದಿಂದ ಕ್ಯಾಬ್ ಚಾಲಕ ವಿನೋದ್ ಆಗಮಿಸಿ ವೈಯಕ್ತಿಕವಾಗಿ ಮಹಿಳೆಗೆ ಮೊಬೈಲ್ ಫೋನ್ ಮರಳಿಸಿದರು. ಫೋನ್ ಶಾಶ್ವತವಾಗಿ ಕಳೆದುಹೋಯಿತು ಎಂದೇ ಭಾವಿಸಿದ್ದ ಜಾಕ್ವೆಲಿನ್, ಫೋನ್ ಮರಳಿ ಕೈಗೆ ಸಿಗುತ್ತಿದ್ದಂತೆ ಅರೆ ಕ್ಷಣ ಭಾವುಕರಾದರು. ವಿನೋದ್ ಅವರ ಪ್ರಾಮಾಣಿಕತೆಗೆ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ನೆಮ್ಮದಿ, ನಿರಾಳತೆ ಅವರನ್ನು ನಗಮೊಗದಲ್ಲಿ ಎದ್ದು ಕಾಣುತ್ತಿತ್ತು.
ವಿನೋದ್ ಅವರು ಇಂಥ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದ್ದು ಇದು ಮೊದಲಲ್ಲ. ಈಟಿವಿ ಭಾರತ್ ಜೊತೆಗೆ ಮಾತನಾಡಿದ ಅವರು ಈ ಹಿಂದೆ ಲಕ್ಷದ್ವೀಪದ ಪ್ರಯಾಣಿಕರು ಬಿಟ್ಟುಹೋದ ಚಿನ್ನ ಮತ್ತು ಹಣವನ್ನು ಹಿಂದಿರುಗಿಸಿದ ಹಿಂದಿನ ಘಟನೆಯನ್ನು ನೆನಪಿಸಿಕೊಂಡರು.
ಕೊಚ್ಚಿನ್ ಸೀಪೋರ್ಟ್ ಟ್ಯಾಕ್ಸಿ ಚಾಲಕರ ಸಂಘದ ಕಾರ್ಯದರ್ಶಿ ಜಹೀರ್, “ಇಂತಹ ಕ್ರಮಗಳು ಸ್ಥಳೀಯ ಚಾಲಕರು ತಮ್ಮಲ್ಲಿ ಅಳವಡಿಸಿಕೊಂಡಿರುವ ಮೌಲ್ಯಗಳನ್ನು ತೋರಿಸುತ್ತವೆ. ನಮ್ಮ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರ ವಿಶ್ವಾಸ ಹೆಚ್ಚಿಸುತ್ತವೆ” ಎಂದರು. ಡಿಟಿಪಿಸಿ ಕಾರ್ಯದರ್ಶಿ ಜಿಜೊ ಜೋಸೆಫ್ ಸೇರಿದಂತೆ ಪ್ರವಾಸೋದ್ಯಮ ಅಧಿಕಾರಿಗಳು ವಿನೋದ್ ಅವರ ಮಾದರಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಈ ರೀತಿಯ ನಡವಳಿಕೆಗಳು ಕೇರಳವನ್ನು ಜಾಗತಿಕ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸ್ವಾಗತಾರ್ಹ ತಾಣವಾಗಿ ಮಾಡುತ್ತವೆ” ಎಂದು ಹೇಳಿದರು. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲೂ ವ್ಯಾಪಕ ಮೆಚ್ಚುಗೆ ಗಳಿಸಿದೆ. ಸಾಮಾನ್ಯ ನಾಗರಿಕರ ಪ್ರಾಮಾಣಿಕತೆಯ ಕೆಲಸಗಳು ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಹೇಗೆ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಚರ್ಚಿಸಿದ್ದಾರೆ.
