ಉದಯವಾಹಿನಿ, ಪ್ರವಾಸಿಗರಲ್ಲಿ ಹಿಂದೂಗಳನ್ನು ಹುಡುಕಿ ಹತ್ಯೆ ಮಾಡಿದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ನಾಳೆಗೆ (ಏ.22) ಒಂದು ವರ್ಷ. ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬದವರ ನೋವು, ಕಣ್ಣೀರು ಹಸಿಯಾಗಿಯೇ ಉಳಿದಿದೆ. ನಮ್ಮ ನೆಲಕ್ಕೆ ನುಗ್ಗಿ ನಮ್ಮವರನ್ನೇ ಗುಂಡಿಕ್ಕಿ ಕೊಂದ ಉಗ್ರರ ಅಟ್ಟಹಾಸ. ಭಯೋತ್ಪಾದಕರನ್ನು ಸದೆಬಡಿಯಲು ಭಾರತ ಕೈಗೊಂಡ ದಿಟ್ಟ ಕ್ರಮ. ‘ಆಪರೇಷನ್ ಸಿಂಧೂರ’ ಮತ್ತು ‘ಆಪರೇಷನ್ ಮಹಾದೇವ’ ಮೂಲಕ ಭಾರತೀಯ ಸೇನೆಯು ತೋರಿದ ಪರಾಕ್ರಮ. ಪ್ರತೀಕಾರದ ಕುದಿಯಲ್ಲಿ ಪಹಲ್ಗಾಮ್ ದಾಳಿಕೋರರನ್ನು ಹುಡುಕಿ ಸದೆಬಡಿದ ಚಿತ್ರಣಗಳು ಸ್ಮೃತಿಪಟಲದಲ್ಲಿ ಒಂದೊಂದಾಗಿ ತೆರೆದುಕೊಳ್ಳುತ್ತವೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಎಂಬ ಸುಂದರ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಸಂಭ್ರಮದಲ್ಲಿದ್ದರು. ಪ್ರವಾಸಿಗರು ತೆರೆದ ಕಣಿವೆಯಲ್ಲಿ ಆನಂದಿಸುತ್ತಿದ್ದಾಗ ಇದ್ದಕ್ಕಿದ್ದಂತೆ, ಶಸ್ತ್ರಸಜ್ಜಿತ ವ್ಯಕ್ತಿಗಳು ಆ ಪ್ರದೇಶಕ್ಕೆ ಪ್ರವೇಶಿಸಿ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು. ಜನರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದರು. ಈ ವೇಳೆ ಪ್ರವಾಸಿಗರ ಮೇಲೆ ಏಕಾಏಕಿ ದಾಳಿ ನಡೆಸಿದ ಉಗ್ರರು, ಹಿಂದೂಗಳನ್ನು ಹುಡುಕಿ ಕೊಂದರು. ಭಯೋತ್ಪಾದಕರ ದಾಳಿಗೆ 26 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡರು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಹಲವರು ಗಾಯಗೊಂಡರು. ಕಣ್ಣೆದುರೇ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿತು. ಹೆಣ್ಣೊಬ್ಬಳು ತನ್ನ ಪತಿಯ ಮೃತದೇಹದ ಮುಂದೆ ಕುಳಿತು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು
