ಉದಯವಾಹಿನಿ, ಬೆಂಗಳೂರು: ಪತಿಯ ಆನ್​ಲೈನ್ ಬೆಟ್ಟಿಂಗ್ ಹಾಗೂ ಮದ್ಯಪಾನ ಚಟದಿಂದ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನಗಾ (28) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಇವರ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪತಿ ಶಂಕರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿ, ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಎ.ನಾರಾಯಣಪುರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಕನಗಾ, ಪತಿ ಜೊತೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಏ.19ರಂದು ದಂಪತಿ ನಡುವೆ ಜಗಳವಾಗಿತ್ತು. ಇದರಿಂದ ಬೇಸತ್ತ ಕನಗಾ, ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2023ರಲ್ಲಿ ತಮಿಳುನಾಡಿನ ಶಂಕರ್ ಜೊತೆ ಕನಗಾ ಮದುವೆಯಾಗಿತ್ತು. ದಂಪತಿಗೆ ಎರಡು ವರ್ಷದ ಗಂಡು ಮಗ ಇದ್ದಾನೆ. ಮೊದಲ ಎರಡು ವರ್ಷ ತಮಿಳುನಾಡಿನ ಪತಿ ಮನೆಯಲ್ಲಿ ವಾಸವಾಗಿದ್ದರು. ಪತಿ ಆನ್‌ಲೈನ್ ಬೆಟ್ಟಿಂಗ್ ಹಾಗೂ ಮದ್ಯಪಾನದ ಚಟದಿಂದಾಗಿ ವಿಪರೀತ ಸಾಲ ಮಾಡಿಕೊಂಡಿದ್ದ. ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಮಧ್ಯಪ್ರವೇಶಿಸಿ ದಂಪತಿಯನ್ನು ಬೆಂಗಳೂರಿಗೆ ಕನಗ ಮನೆಯವರು ಕರೆಸಿಕೊಂಡಿದ್ದರು. ಎ.ನಾರಾಯಣಪುರದಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದರು. ಜೀವನಕ್ಕಾಗಿ ದಂಪತಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಇತ್ತೀಚೆಗೆ ಹಣ್ಣಿನ ವ್ಯಾಪಾರದಲ್ಲಿ ಸಂಪಾದಿಸಿದ್ದ ಹಣದ ಪೈಕಿ ಕೊಂಚ ಹಣವನ್ನು ಪತ್ನಿಗೆ ತಿಳಿಯದೆ ಪತಿ ತನ್ನ ಬಳಿ ಇಟ್ಟುಕೊಂಡಿದ್ದ. ಹಣದ ಬಗ್ಗೆ ಪ್ರಶ್ನಿಸಿದ್ದಲ್ಲದೆ, ಆನ್‌ಲೈನ್ ಬೆಟ್ಟಿಂಗ್ ಆಡುತ್ತಿರುವುದನ್ನು ಆಕ್ಷೇಪಿಸಿ ಗಲಾಟೆ ಮಾಡಿದ್ದರು. ಇದರಿಂದ ನೊಂದಿದ್ದ ಕನಗಾ ಆತ್ಮಹತ್ಯೆಗೆ ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಗಳ ಕೊಂದು ತಾಯಿ ಆತ್ಮಹತ್ಯೆ: ಮಗಳನ್ನು ಉಸಿರುಗಟ್ಟಿ ಸಾಯಿಸಿದ ತಾಯಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ಕಳೆದ ವಾರ ನಡೆದಿತ್ತು. 13 ವರ್ಷದ ಮಗಳು ಹಾಗೂ 45 ವರ್ಷದ ಸುವರ್ಣ ಸಾವನ್ನಪ್ಪಿದ್ದಾರೆ. ಪತಿ ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಪ್ರತ್ಯೇಕವಾಗಿ ಪೊಲೀಸರು ಅಸಹಜ ಸಾವು (UDR) ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆ ಕೊಠಡಿಯ ಮಂಚದ ಮೇಲೆ ಮಗಳ ಶವ ಉಸಿರುಗಟ್ಟಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ, ತಾಯಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.  ಆತ್ಮಹತ್ಯೆ ಪರಿಹಾರವಲ್ಲ: ನಿಮಗೆ ಆತ್ಮಹತ್ಯಾ ಆಲೋಚನೆಗಳು ಬರುತ್ತಿದ್ದರೆ ಅಥವಾ ನೀವು ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದರೆ, ಇಲ್ಲವೇ ನಿಮಗೆ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ ಸಲಹೆ ನೀಡಲು ಯಾವಾಗಲೂ, ಯಾರಾದರೂ ಇದ್ದೇ ಇರುತ್ತಾರೆ. ಸ್ನೇಹ ಫೌಂಡೇಶನ್ – 04424640050 (24×7 ಲಭ್ಯವಿದೆ) ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸಹಾಯವಾಣಿ ಐಕಾಲ್ ನಂಬರ್​ 9152987821 (ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಲಭ್ಯವಿದೆ) ಕರೆ ಮಾಡಬಹುದು.

Leave a Reply

Your email address will not be published. Required fields are marked *

error: Content is protected !!