ಉದಯವಾಹಿನಿ, ನವದೆಹಲಿ: ದಕ್ಷಿಣ ಕಾಶ್ಮೀರದ ಪಹಲ್ಗಾಮ್​ನಲ್ಲಿ ಭಯೋತ್ಪಾದಕ ದಾಳಿ ನಡೆದು ಇಂದಿಗೆ ವರ್ಷವಾಗಿದ್ದು, ಈ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ ಸಂತ್ರಸ್ತರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ. ಈ ದುಃಖದಲ್ಲಿ ಭಾರತೀಯರು ಒಗ್ಗಟ್ಟಾಗಿ ನಿಲ್ಲುತ್ತಾರೆ ಎಂದಿದ್ದು, ಭಾರತವು ಭಯೋತ್ಪಾದಕರಿಗೆ ಎಂದು ಮಣಿಯುವುದಿಲ್ಲ ಎಂಬ ಖಡಕ್​ ಸಂದೇಶ ರವಾನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ಭಾರತ ಎಂದಿಗೂ ಭಯೋತ್ಪಾದನೆಗೆ ಮಣಿಯುವುದಿಲ್ಲ. ಯಾವುದೇ ಭಯೋತ್ಪಾದಕ ಕೃತ್ಯಗಳನ್ನು ಯಶಸ್ವಿಯಾಗಲು ಬಿಡುವುದಿಲ್ಲ ಎಂದಿದ್ದಾರೆ. 2025ರ ಎಪ್ರಿಲ್​ 22ರಂದು ಪಾಕಿಸ್ತಾನ ಬೆಂಬಲಿತ ಉಗ್ರರು ಪಹಲ್ಗಾಮ್​ನಲ್ಲಿ ನಡೆಸಿದ ಮಾರಣಾಂತಿಕ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕ ಪ್ರವಾಸಿಗರನ್ನು ಧರ್ಮದ ಆಧಾರದ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ದಾಳಿಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಒಂದು ಅಂಗವಾದ ದಿ ರೆಸಿಸ್ಟೆನ್ಸ್ ಫ್ರಂಟ್ ನಡೆಸಿತ್ತು.

ಕಳೆದ ವರ್ಷ ಪಹಲ್ಗಾಮ್​ನಲ್ಲಿ ನಡೆದ ಈ ಭೀಕರ ದಾಳಿಯಲ್ಲಿ ಜೀವ ಕಳೆದುಕೊಂಡ ಅಮಾಯಕರನ್ನು ಸ್ಮರಿಸಿ ಪೋಸ್ಟ್​ ಮಾಡಿರುವ ಪ್ರಧಾನಿ, ಅವರನ್ನು ಎಂದಿಗೂ ಮರೆಯುವುದಿಲ್ಲ. ಪ್ರೀತಿ ಪಾತ್ರರನ್ನು ಕಳೆದುಕೊಂಡ ಅವರ ಕುಟುಂಬದ ಜೊತೆಗೆ ಸದಾ ನಾವಿರುತ್ತೇವೆ ಎಂದು ಅಭಯ ನೀಡಿದ್ದಾರೆ. ದೇಶವಾಗಿ ದುಃಖ ಮತ್ತು ಪರಿಹಾರದಲ್ಲಿ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ. ಭಾರತವು ಈ ರೀತಿಯ ಭಯೋತ್ಪಾದಕ ದಾಳಿಗೆ ಎಂದಿಗೂ ಮಣಿಯುವುದಿಲ್ಲ. ಭಯೋತ್ಪಾದಕರ ಈ ಹೀನ ಕೃತ್ಯ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಪೋಸ್ಟ್​ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!