ಉದಯವಾಹಿನಿ, ತ್ರಿಬಾಂಗ್ಲಾದೇಶದಲ್ಲಿ ದಡಾರ ಹಾಗೂ ರುಬೆಲ್ಲಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇಘಾಲಯ ಸರ್ಕಾರವು ತನ್ನ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ವಿಶೇಷವಾಗಿ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯಲ್ಲಿ 118ಕ್ಕೂ ಹೆಚ್ಚು ಸಾವುಗಳು ಹಾಗೂ ಸಾವಿರಾರು ಶಂಕಿತ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ, ಗಡಿ ಪ್ರದೇಶಗಳಲ್ಲಿ ಕಣ್ಗಾವಲು ಬಿಗಿಗೊಳಿಸಲಾಗಿದೆ. ಸ್ಥಳೀಯ ನಿವಾಸಿಗಳಲ್ಲಿ ಜ್ವರ ಹಾಗೂ ದದ್ದುಗಳಂತಹ ರೋಗಲಕ್ಷಣಗಳನ್ನು ಕಂಡುಬಂದರೆ, ವರದಿ ಮಾಡುವಂತೆ ಒತ್ತಾಯಿಸಲಾಗಿದೆ.
ವಾಸ್ತವವಾಗಿ ಏಪ್ರಿಲ್ 19, 2026ರ ಹೊತ್ತಿಗೆ, ಬಾಂಗ್ಲಾದೇಶದಲ್ಲಿ 3,443ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ, 23,600 ಶಂಕಿತ ದಡಾರ ಪ್ರಕರಣಗಳು ವರದಿಯಾಗಿವೆ. ಬಾಂಗ್ಲಾದೇಶದೊಳಗೆ, 1.9 ಮಿಲಿಯನ್‌ಗಿಂತಲೂ ಹೆಚ್ಚು ಮಕ್ಕಳಿಗೆ ಈಗಾಗಲೇ ದಡಾರ ಮತ್ತು ರುಬೆಲ್ಲಾ ವಿರುದ್ಧ ಲಸಿಕೆ ನೀಡಲಾಗಿದೆ. ಮೇಘಾಲಯದಲ್ಲಿಯೂ ಸಹ ಗಡಿ ಹಳ್ಳಿಗಳಲ್ಲಿ ಲಸಿಕೆ ಹಾಕುವ ಬಗ್ಗೆ ಒತ್ತು ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲಾಡಳಿತವು ವಿಶ್ವ ಆರೋಗ್ಯ ಸಂಸ್ಥೆ (WHO) ಸಹಯೋಗದೊಂದಿಗೆ ಏಪ್ರಿಲ್ 2026 ರಲ್ಲಿ ವಿಶೇಷ ಮೇಲ್ವಿಚಾರಣೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಭೆಗಳನ್ನು ನಡೆಸಿತು. ಈ ಸಭೆಗಳ ಪ್ರಾಥಮಿಕ ಉದ್ದೇಶವೆಂದರೆ ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ ದಡಾರ ಮತ್ತು ರುಬೆಲ್ಲಾ ಪ್ರಕರಣಗಳ ಹೆಚ್ಚಳದ ನಂತರ ಗಡಿಯಾಚೆಗಿನ ಪ್ರಸರಣದ ಅಪಾಯ ತಡೆಗಟ್ಟುವುದು ಹಾಗೂ ಜಾಗರೂಕತೆಯನ್ನು ಹೆಚ್ಚಿಸುವುದು.
ಆರೋಗ್ಯ ಅಧಿಕಾರಿಗಳು, ಮಕ್ಕಳಿಗೆ MR ಲಸಿಕೆಯನ್ನು ಸಕಾಲಿಕವಾಗಿ ನೀಡಬೇಕೆಂದು ಮತ್ತು ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಕಣ್ಗಾವಲು ವಹಿಸಲು ಮನವಿ ಮಾಡಿದ್ದಾರೆ. ಮೇಘಾಲಯದಲ್ಲಿ ಇಲ್ಲಿಯವರೆಗೆ ಯಾವುದೇ ಗಂಭೀರ ಪ್ರಕರಣಗಳು ವರದಿಯಾಗಿಲ್ಲದಿದ್ದರೂ, ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಇಂದಿನ ಈ ವರದಿಯಲ್ಲಿ ದಡಾರ, ರುಬೆಲ್ಲಾ ಎಂದರೇನು? ಈ ರೋಗಗಳು ಎಷ್ಟು ಗಂಭೀರವಾಗಿದೆ ಹಾಗೂ ಇವುಗಳ ಲಕ್ಷಣಗಳು ಯಾವುವು ಎಂಬುದರ ಬಗ್ಗೆ ವಿವರವಾಗಿ ತಿಳಿಯೋಣ.
ಏನಿದು ದಡಾರ ಕಾಯಿಲೆ?: ದಡಾರವು ಪ್ಯಾರಾಮಿಕ್ಸೊವೈರಸ್ ಕುಟುಂಬಕ್ಕೆ ಸೇರಿದ ವೈರಸ್‌ನಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಈ ಸೋಂಕು ಸೋಂಕಿತ ವ್ಯಕ್ತಿಯಿಂದ ಕೆಮ್ಮುವುದು, ಸೀನುವುದು, ಸ್ಪರ್ಶಿಸುವುದು ಅಥವಾ ತಿನ್ನುವ ಮೂಲಕ ಹರಡುತ್ತದೆ. ವೈರಸ್ ಗಂಟಲು ಹಾಗೂ ಮೂಗಿನಲ್ಲಿ ವಾಸಿಸುತ್ತದೆ. ಇದು ಮಗು ಅಥವಾ ವಯಸ್ಕರಿಗೆ ಸೋಂಕು ತಗುಲಿದಾಗ ಅದು ಉಸಿರಾಟದ ಪ್ರದೇಶ, ಶ್ವಾಸಕೋಶ, ಚರ್ಮ ಮತ್ತು ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಗರ್ಭಿಣಿ ಮಹಿಳೆಗೆ ಈ ಸೋಂಕು ತಗುಲಿದರೆ, ಅದು ಬೆಳೆಯುತ್ತಿರುವ ಭ್ರೂಣಕ್ಕೆ ಮಾರಕವಾಗಬಹುದು. ಅಪೌಷ್ಟಿಕತೆ ಹೊಂದಿರುವ ಮಕ್ಕಳು ಹಾಗೂ ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳಲ್ಲಿ ಈ ಸೋಂಕಿನ ಅಪಾಯವು ವಿಶೇಷವಾಗಿ ಹೆಚ್ಚಾಗಿರುತ್ತದೆ. ಇದಲ್ಲದೆ, ದಡಾರ ಲಸಿಕೆಯನ್ನು ಪಡೆಯದ ಮಕ್ಕಳು, ಗರ್ಭಿಣಿಯರು ಇತರರಿಗಿಂತ ಈ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ.
