ಉದಯವಾಹಿನಿ, ಹೈದರಾಬಾದ್ (ತೆಲಂಗಾಣ): ನದಿ, ಹಳ್ಳ, ಕೆರೆ, ಬಾವಿಗಳು ಈಗ ಯಥೇಚ್ಛವಾಗಿರುವ ಕೊಳವೆಬಾವಿಗಳು ಜೀವರಾಶಿಗಳ ಕುಡಿಯುವ ನೀರಿನ ಜಲಮೂಲಗಳು. ಇಂತಹ ಅತ್ಯಮೂಲ್ಯ ಜಲಮೂಲಗಳೇ ವಿಷಕಾರಿಯಾಗುತ್ತಿವೆ ಎಂಬ ಆಘಾತಕಾರಿ ಅಂಶವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದು ಜಾಗತಿಕ ಸಾರ್ವಜನಿಕ ಆರೋಗ್ಯಕ್ಕೆ ಸವಾಲು ಎಂಬಂತಾಗಿದೆ. ಸಿಹಿನೀರಿನ ಮೂಲಗಳಲ್ಲಿ ‘ಕ್ಲೋರೋಫೆನಾಲ್’ ಎಂಬ ಹೊಸ ಮತ್ತು ಅತ್ಯಂತ ಅಪಾಯಕಾರಿ ಕಲುಷಿತಕಾರಕವನ್ನು ವಿಜ್ಞಾನಿಗಳು ಇತ್ತೀಚೆಗೆ ಪತ್ತೆಹಚ್ಚಿದ್ದಾರೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾದ ನದಿಗಳಲ್ಲಿ ಈ ವಿಷಕಾರಿ ರಾಸಾಯನಿಕ ಅಂಶ ಕಂಡುಬಂದಿದ್ದು, ಇದು ನೀರಿನಲ್ಲಿ ದೀರ್ಘಕಾಲ ಉಳಿಯುವ ಗುಣ ಹೊಂದಿದೆ.

ಈ ವಿಷಕಾರಿ ಅಂಶ ಕ್ಯಾನ್ಸರ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಇರುವುದರಿಂದ ವಿಜ್ಞಾನಿಗಳಲ್ಲಿ ಆತಂಕ ಮೂಡಿಸಿದೆ. ವಿಶ್ವದಾದ್ಯಂತ ಇರುವ ಸಿಹಿನೀರಿನ ಮೂಲಗಳು ಈಗಾಗಲೇ ಚರಂಡಿ ನೀರು, ಪ್ಲಾಸ್ಟಿಕ್ ತ್ಯಾಜ್ಯ, ಇ-ಕೋಲಿ ಬ್ಯಾಕ್ಟೀರಿಯಾ ಹಾಗೂ ಸೀಸ ಮತ್ತು ಆರ್ಸೆನಿಕ್‌ನಂತಹ ಭಾರ ಲೋಹಗಳಿಂದ ಕಲುಷಿತಗೊಂಡಿವೆ. ಈಗ ಇವುಗಳ ಸಾಲಿಗೆ ‘ಕ್ಲೋರೋಫೆನಾಲ್’ ಕೂಡ ಸೇರ್ಪಡೆಯಾಗಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ.

ಕಾಗದದ ಗಿರಣಿಗಳು, ಕೀಟನಾಶಕ ಕಾರ್ಖಾನೆಗಳು ಮತ್ತು ರಾಸಾಯನಿಕ ಉತ್ಪಾದನಾ ಘಟಕಗಳಿಂದ ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯವು ಜಲಮೂಲಗಳಿಗೆ ಸೇರುವುದರಿಂದ ಈ ವಿಷಕಾರಿ ರಾಸಾಯನಿಕಗಳು ಕುಡಿಯುವ ನೀರಿಗೆ ಸೇರುತ್ತಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

12 ರಾಷ್ಟ್ರಗಳ ಒಕ್ಕೂಟದಿಂದ ಜಂಟಿ ಕಾರ್ಯಾಚರಣೆ: ಬೆಳೆಯುತ್ತಿರುವ ಈ ಭೀತಿಯನ್ನು ಎದುರಿಸಲು ಭಾರತ, ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಸೇರಿದಂತೆ 12 ದೇಶಗಳ ಒಕ್ಕೂಟವು ಕೈಜೋಡಿಸಿವೆ. ಇವು ಜಂಟಿಯಾಗಿ ಕಡಿಮೆ ವೆಚ್ಚದ ಮತ್ತು ಪ್ರಮಾಣಿತ ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸಲು ಮುಂದಾಗಿವೆ. ಈ ಉಪಕ್ರಮದಲ್ಲಿ ಭಾರತವನ್ನು ಹೈದರಾಬಾದ್‌ನ ಇಪಿಟಿಆರ್​ಐ ಮಾಜಿ ಮುಖ್ಯ ವಿಜ್ಞಾನಿ ಹಾಗೂ ಪ್ರಸ್ತುತ ಭಾರತೀಯ ಗುಣಮಟ್ಟ ಮೌಲ್ಯಮಾಪನ ಸಂಸ್ಥೆಯ ಜಲ ಗುಣಮಟ್ಟ ವಿಭಾಗದ ಅಧ್ಯಕ್ಷರಾಗಿರುವ ಡಾ. ಎನ್. ರವೀಂದರ್ ಅವರು ಪ್ರತಿನಿಧಿಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಡಾ. ರವೀಂದರ್ ಅವರು, “ರಾಸಾಯನಿಕಗಳ ಆರಂಭಿಕ ಪತ್ತೆ ಅತ್ಯಂತ ಅವಶ್ಯಕವಾಗಿದೆ. ವಿಶ್ವಾಸಾರ್ಹ ವಿಶ್ಲೇಷಣಾ ವಿಧಾನವಿದ್ದರೆ, ನಾವು ಮಾಲಿನ್ಯದ ಮಟ್ಟವನ್ನು ಬೇಗನೆ ಗುರುತಿಸಿ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಬಹುದು. ಪ್ರಸ್ತುತ ಈ ಪರೀಕ್ಷೆಗೆ ಬಳಸುವ ಸುಧಾರಿತ ಉಪಕರಣಗಳ ಬೆಲೆ ಸುಮಾರು 1.5 ಕೋಟಿ ರೂಪಾಯಿಗಳಷ್ಟಿದ್ದು, ಇದು ವ್ಯಾಪಕ ಮೇಲ್ವಿಚಾರಣೆಗೆ ಅಡ್ಡಿಯಾಗಿದೆ” ಎಂದು ತಿಳಿಸಿದ್ದಾರೆ.

ಆರೋಗ್ಯದ ಮೇಲೆ ಗಂಭೀರ ಪರಿಣಾಮ: ಕ್ಲೋರೋಫೆನಾಲ್‌ಗಳು ಮೇಲ್ಮೈ ನೀರು ಮತ್ತು ಅಂತರ್ಜಲ ಎರಡರಲ್ಲೂ ದೀರ್ಘಕಾಲ ಉಳಿಯುತ್ತವೆ. ಇವು ಮೊದಲು ಮೀನುಗಳಂತಹ ಜಲಚರಗಳ ದೇಹವನ್ನು ಸೇರಿ, ನಂತರ ಆಹಾರ ಸರಪಳಿಯ ಮೂಲಕ ಮನುಷ್ಯರ ದೇಹವನ್ನು ಪ್ರವೇಶಿಸುತ್ತವೆ. ಇಂತಹ ಕಲುಷಿತ ನೀರನ್ನು ಸೇವಿಸುವುದರಿಂದ ಚರ್ಮದ ಕಿರಿಕಿರಿ, ಹೊಟ್ಟೆ ನೋವು, ಯಕೃತ್ತು ಮತ್ತು ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳಿಗೆ ಹಾನಿಯಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೆ, ಇದು ನರಮಂಡಲ ಮತ್ತು ರೋಗನಿರೋಧಕ ಶಕ್ತಿಯ ಮೇಲೆ, ವಿಶೇಷವಾಗಿ ಮಕ್ಕಳಲ್ಲಿ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.

ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆಯು ಕ್ಲೋರೋಫೆನಾಲ್‌ಗಳನ್ನು ‘ಕ್ಯಾನ್ಸರ್ ಕಾರಕ’ ರಾಸಾಯನಿಕಗಳ ಪಟ್ಟಿಗೆ ಸೇರಿಸಿದ್ದು, ಇದರ ಭೀಕರತೆಯನ್ನು ಎತ್ತಿ ತೋರಿಸಿದೆ. ಮುಂದಿನ 6 ತಿಂಗಳೊಳಗೆ ಹೊಸ ಜಾಗತಿಕ ಪರೀಕ್ಷಾ ವಿಧಾನವನ್ನು ಅಂತಿಮಗೊಳಿಸಲು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!